ಸಿನಿ ಸ್ಟೈಲ್
ಸೆ.30ರವರೆಗೆ ನ್ಯಾಯಾಂಗ ಬಂಧನದಲ್ಲಿ ದರ್ಶನ್
ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚಚರರ ಸುದೀರ್ಘವಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಆರೋಪ ಪಟ್ಟಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಸೆಪ್ಟೆಂಬರ್ 30ರವರೆಗೆ ದರ್ಶನ್ ಹಾಗೂ ಗ್ಯಾಂಗ್ನ ನ್ಯಾಯಾಂಗ ಬಂಧನ ಅವಧಿಯು ವಿಸ್ತರಣೆಯಾಗಿದೆ.
ದರ್ಶನ್ ಮತ್ತು ಗ್ಯಾಂಗ್ ಈಗಾಗಲೇ ಜೈಲು ಸೇರಿ ಮೂರು ತಿಂಗಳು ಆಗಿದ್ದು, ಇಂದಿಗೆ (ಸೆಪ್ಟೆಂಬರ್ 17) ದರ್ಶನ್ ನ್ಯಾಯಾಂಗ ಬಂಧನದ ಅವಧಿಯು ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಗೂ ಗ್ಯಾಂಗ್ನ ಕೋರ್ಟ್ ಎದುರು ಹಾಜರುಪಡಿಸಲಾಗಿದೆ.
ಮತ್ತೊಮ್ಮೆ ಜಡ್ಜ್ ಎದುರು ದರ್ಶನ್ ಪರ ವಕೀಲರು ಕುರ್ಚಿ ಬಗ್ಗೆ ಮನವಿ ಮಾಡಿದ್ದಾರೆ. ಜೈಲಾಧಿಕಾರಿಗಳು ‘ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕು ಆಗಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಬೇರೆ ಖೈದಿಗಳಿಗೆ ಆ ವ್ಯವಸ್ಥೆ ಇದೆ. ಆದರೆ, ದರ್ಶನ್ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಪರ ವಕೀಲರು ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ’ ಎಂದು ಹೇಳಿದರು. ಜೈಲಿನ ನಿಯಮ ಪಟ್ಟಿಯಲ್ಲಿ ‘ಕೈದಿಗಳಿಗೆ ಏನು ವ್ಯವಸ್ಥೆ ನೀಡಬೇಕು ಎಂದು ಇದೆ. ಅದು ಕೊಡಬೇಕು ಎಂದು ಆದೇಶ ಮಾಡುತ್ತೇನೆ’ ಎಂದು ಜಡ್ಜ್ ಹೇಳಿದರು.
ಇಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಎದುರು ಅವರನ್ನು ಹಾಜರುಪಡಿಸಲಾಯಿತು. ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಪವಿತ್ರಾಗೌಡ, ಬಳ್ಳಾರಿ ಸೆಂಟ್ರಲ್ ಜೈಲಿನಿಂದ ದರ್ಶನ್ ಹಾಜರಾಗಿದ್ದರು. ಉಳಿದಂತೆ ತುಮಕೂರು, ಮೈಸೂರು, ಧಾರವಾಡ, ಕಲಬುರಗಿ, ವಿಜಯಪುರ, ಹಿಂಡಲಗಾ ಜೈಲಿನಿಂದ ಆರೋಪಿಗಳು ಹಾಜರಾಗಿದ್ದರು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಜಡ್ಜ್ ಆದೇಶ ಹೊರಡಿಸಿದ್ದಾರೆ.
3991 ಪುಟಗಳ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆ, ಸಾಕ್ಷಿಗಳ ಬಗ್ಗೆ ಉಲ್ಲೇಖ ಆಗಿದೆ. ವಿಚಾರಣೆ ವೇಳೆ ದರ್ಶನ್ ಅವರು ತಾವು ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಎಲ್ಲಿಯೂ ಕೊಲೆಯನ್ನು ಇವರೇ ಮಾಡಿದ್ದಾರೆ ಎಂಬ ವಿಚಾರ ಉಲ್ಲೇಖ ಆಗಿಲ್ಲ. ಶೀಘ್ರವೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡೋ ಸಾಧ್ಯತೆ ಇದೆ.
Post a comment
Log in to write reviews