ಮಂಗಳೂರು: ಕೊರಗಜ್ಜನ ಹೆಸರಿನಲ್ಲಿ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಹೆಸರಿನಲ್ಲಿ, ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ‘ಡಿವೊಟೀಸ್ ಆಫ್ ಕುತ್ತಾರು ಕೊರಗಜ್ಜ’ ಎಂಬ ಖಾತೆ ತೆರೆದು ಅದರಲ್ಲಿ ಅನ್ನದಾನ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.
ಮಂಗಳೂರು ತಾಲೂಕಿನ ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನದ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ದೈವಸ್ಥಾನದ ವೆಬ್ ಸೈಟ್ ಎಂದು ಬಿಂಬಿಸುವಂತೆ ಈ ನಕಲಿ ಖಾತೆ ತೆರೆಯಲಾಗಿದೆ. ಕೊರಗಜ್ಜನ ಫೋಟೋ ಹಾಕಿ ನಾವು ಕಷ್ಟದಲ್ಲಿದ್ದೇವೆ ಕೊರಗಜ್ಜನ ಭಕ್ತರು ಸಹಾಯ ಮಾಡುವಂತೆ ಕೇಳಿಕೊಳ್ಳಲಾಗಿದೆ. ಇದನ್ನು ನಂಬಿ ಅನೇಕ ಭಕ್ತರು ದೇಣಿಗೆ ನೀಡಿದ್ದಾರೆ. ಈ ವಿಚಾರ ದೈವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದೈವಸ್ಥಾನದ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್‌ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ರೀತಿ ಆಡಳಿತ ಮಂಡಳಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಪ್ರಕಟಣೆ ಬಂದಲ್ಲಿ ಅದಕ್ಕೆ ಭಕ್ತರು ಪ್ರತಿಕ್ರಿಯಿಸಬಾರದು ಎಂದು ಕ್ಷೇತ್ರದ ಆಡಳಿತ ಮಂಡಳಿ ವಿನಂತಿಸಿದೆ.ಕೊರಗಜ್ಜ ದೈವಕ್ಕೆ ಚಕ್ಕುಲಿ, ಎಲೆ-ಅಡಿಕೆ, ಮದ್ಯವೆ ನೈವೇದ್ಯ. ಇದನ್ನು ಹೊರತುಪಡಿಸಿ ಯಾವುದೇ ವೈಭವದ, ಆಡಂಬರದ ಸೇವೆಯನ್ನು ಕೊರಗಜ್ಜ ಬಯಸುವುದಿಲ್ಲ. ಕೊರಗಜ್ಜನ ಭಕ್ತರು ಕೇವಲ ಕರಾವಳಿ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯದಲ್ಲೂ ಇದ್ದು ಇದನ್ನೇ ಬಂಡವಾಳ ಮಾಡಿಕೊಂಡಿರುವ ದುರುಳರು ವಂಚನೆಗೆ ಇಳಿದಿದ್ದಾರೆ.
Post a comment
Log in to write reviews