ಬಂಜಾರಾ ಸಮಾಜಕ್ಕೆ ಅವಾಚ್ಯ ಶಬ್ಧದಿಂದ ನಿಂದಿಸಿದ ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ
ವಿಜಯಪುರ: ಕಂದಾಯ ಇಲಾಖೆ ಗ್ರಾಮಲೆಕ್ಕಾಧಿಕಾರಿಯೊಬ್ಬರು ಬಂಜಾರಾ ಸಮಾಜಕ್ಕೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇದೀಗ ಬಂಜಾರ ಸಮಾಜದವರು ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ “ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ”ದ ಜಿಲ್ಲಾಧ್ಯಕ್ಷ ರಾಜು ಜಾಧವ್ ಅವರು, ಇಂಡಿ ತಾಲೂಕಿನ ಅಥರ್ಗಾ ಗ್ರಾಮ ಲೆಕ್ಕಾಧಿಕಾರಿ ಯುವರಾಜ ನಿಂಬರಗಿ ಎಂಬುವವರು, ರಾಮತೀರ್ಥ ತಾಂಡಾ ನಿವಾಸಿಯಾದ ರವಿ ರಾಠೋಡ ಎಂಬುವವರಿಗೆ ಫೋನ ಮೂಲಕ ಕರೆ ಮಾಡಿ ಬಂಜಾರ ಸಮುದಾಯದ ಬಗ್ಗೆ ಹಗೂರವಾಗಿ ಮಾತನಾಡಿದ್ದಲ್ಲದೆ, ಅವಾಚ್ಯ ಶಬ್ದದ ಮೂಲಕ ವರ್ತಿಸಿದ್ದಾರೆ.
ಮುಗ್ಧ ಬಂಜಾರಾ ಸಮುದಾಯದವರಿಗೆ, ಕಂದಾಯ ಇಲಾಕೆಯ ಗ್ರಾಮಲೆಕ್ಕಾಧಿಕಾರಿ ಜಾತಿ ನಿಂದನೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ? ಇದರಿಂದ ಬಂಜಾರ ಸಮಾಜದ ಜನರ ಮನಸ್ಸಿಗೆ ತೀವ್ರ ನೋವಾಗಿದೆ. ಜಾತಿ ನಿಂದನೆ ಮಾಡಿದ್ದು ಸಮುದಾಯಕ್ಕೆ ಅನ್ಯಾಯದ ಸಂಗತಿಯಾಗಿದೆ. ಆದರೂ ಆತನ ವಿರುದ್ಧ ವಿಜಯಪುರ ಜಿಲ್ಲಾಧಿಕಾರಿ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವದಕ್ಕೆ ಕಾರಣವೇನು?. ಆತನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಾದರೂ ಪೋಲಿಸ್ ಇಲಾಖೆ ಆತನನ್ನು ಬಂಧಿಸದೆ ತಲೆಮರೆಸಿಕೊಳ್ಳಲು ಸಾಥ್ ನೀಡುತ್ತಿದ್ದಂತೆ ಎದ್ದು ಕಾಣುತ್ತಿದೆ. ಇಷ್ಟೇ ಅಲ್ಲದೆ, ಈತನ ವಿರುದ್ದ ಕಾನೂನು ರೀತಿಯಲ್ಲಿ ಶಿಕ್ಷೆ ಆಗಬೇಕಿದೆ. ಇಲ್ಲದಿದ್ದರೆ ಮುಗ್ದ ಬಂಜಾರ ಸಮುದಾಯಕ್ಕೆ ಅನ್ಯಾಯ ಎಸಗಿದಂತಾಗುತ್ತದೆ ಎಂದು ಆಗ್ರಹಿಸಿದರು.
ಮುಂದುವರೆದು ಮಾತನಾಡುತ್ತಾ ಗ್ರಾಮ ಲೆಕ್ಕಾಧಿಕಾರಿ ಯುವರಾಜ ನಿಂಬರಗಿಯವರು ರಾಮತೀರ್ಥ ತಾಂಡಾ ನಿವಾಸಿ ರವಿ ರಾಠೋಡ ಎಂಬುವವರಿಗೆ ಫೋನ ಮೂಲಕ ಕರೆ ಮಾಡಿ ಬಂಜಾರ ಸಮುದಾಯದ ಬಗ್ಗೆ ಹಗೂರವಾಗಿ ಮಾತನಾಡಿದ್ದಲ್ಲದೆ, ಇಬ್ಬರೂ ಫೋನ್‌ನಲ್ಲಿ ಮಾತನಾಡುವಾಗ ಗ್ರಾಮ ಲೆಕ್ಕಾಧಿಕಾರಿ ಲಂಬಾಣಿ ಜಾತಿಯ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿದ್ದರಿಂದ ಆತನ ಮೇಲೆ ಹೊರ್ತಿ ಠಾಣೆಯಲ್ಲಿ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಚವ್ಹಾಣ ಅವರು ದೂರು ದಾಖಲಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಬಳಿಕ ಮಾತನಾಡಿದ ಬಂಜಾರಾ ಸಮಾಜದ ಮುಖಂಡ, ಖ್ಯಾತ ಮದುಮೇಹ ತಜ್ಞ ಡಾ.ಬಾಬುರಾಜೇಂದ್ರ ನಾಯಕ ಅವರು, ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣನ ನಾಡಿನಲ್ಲಿ ಜಾತಿ ನಿಂದನೆ ನಡೆಯುತ್ತಿದೆ. ಕಳೆದ ಶುಕ್ರವಾರ ಲಂಬಾಣಿ ಸಮಾಜದ ರವಿ ರಾಠೋಡ ಎಂಬಾತನ ಮೇಲೆ ಜಾತಿ ಸೂಚಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಇದಾಗಿದೆ. ಅವರಿಬ್ಬರ ಮದ್ಯೆ ವೈಯಕ್ತಿಕವಾಗಿ ಏನೇ ತಂಟೆ ತಕರಾರು ಇರಬಹುದು. ಆದರೆ, ಸಮಾಜಕ್ಕೆ ಜಾತಿ ನಿಂದನೆ ಮಾಡುವುದು ಖಂಡನೀಯ ಎಂದು ಕಿಡಿಕಾರಿದರು. ಸರ್ಕಾರ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಳ್ಳಬೇಕಿತ್ತು, ಆದರೆ, ಈ ವಿಚಾರದಲ್ಲಿ ಆ ಕೆಲಸ ಆಗಿಲ್ಲ. ತಾಲೂಕಾ ದಂಡಾಧಿಕಾರಿ ಹಾಗೂ ಜಿಲ್ಲಾಢಳಿತ ಮೌನಕ್ಕೆ ಶರಣಾಗಿದ್ದಾರೆ. ಸಮಾಜದ ವ್ಯಕ್ತಿಯನ್ನು ನಿಂದಿಸಿದ್ದು ತುಂಬಾ ನೋವಿನ ಸಂಗತಿ ಜಾತಿ ಎತ್ತಿ ಮಾತನಾಡಿರುವುದು ನೋಡಿದ್ದರೆ ಅಧಿಕಾರಿ ಬಹಳ ಪ್ರಭಾವಿ ಇದ್ದಂತೆ ಕಾಣುತ್ತೆ. ಇಂತಹ ಅಧಿಕಾರಿ ನಡೆಯಿಂದ ಇಡೀ ಕಂದಾಯ ಇಲಾಕೆ ತಲೆತಗ್ಗಿಸುವಂತೆ ಆಗುತ್ತೆ. ಆದಕಾರಣ ಈ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಈ ಗ್ರಾಮ ಲೆಕ್ಕಾಧಿಕಾರಿ ಮೇಲೆ ಶಿಸ್ತುಕ್ರಮ ಆಗದಿದ್ದರೇ ಸಮಾಜದ ಜನರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಬಾಬು ಪವಾರ, ರಾಜು ಪವಾರ, ಸುನೀಲ ರಾಠೋಡ, ಗಣಪತಿ ರಾಠೋಡ, ವಿಶ್ವನಾಥ ರಾಠೋಡ, ಸಂಜೀವ ರಾಠೋಡ, ಸುರೇಶ ಬಿಜಾಪುರ ಹಾಗೂ ಇನ್ನಿತರು ಉಪಸ್ಥಿತರಿದ್ದರು.
Post a comment
Log in to write reviews