ಬೆಂಗಳೂರು: ಬೆಂಗಳೂರಿನಲ್ಲಿ 20 ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಂಡಿದ್ದು ನಗರದ ಜನರಲ್ಲಿ ಆತಂಕದ ವಾತವರಣ ಸೃಷ್ಠಿಸಿದೆ.
ಮಳೆ, ಶೀತ ಗಾಳಿಯಂತಹ ಹವಾಮಾನ ವೈಪರಿತ್ಯವೇ ಡೆಂಗ್ಯೂ ಸಾಂಕ್ರಾಮಿಕ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸುತ್ತಿದ್ದಾರೆ.
ಕಳೆದ ವರ್ಷಕ್ಕಿಂತ ಈ ಬಾರಿ ನಾಲ್ಕು ಪಟ್ಟು ಹೆಚ್ಚಿನದಾಗಿ ತಪಾಸಣೆ ಮಾಡಲಾಗಿದೆ, ನಿರಂತರವಾಗಿ ಫೀವರ್ ಸರ್ವೆ ನಡೆಸುತ್ತಿರುವುದರಿಂದ ಹೆಚ್ಚಿನ ಪ್ರಕರಣಗಳು ಪತ್ತೆಯಾಗಲು ಕಾರಣ ಎಂದು ಬಿಬಿಎಂಪಿ ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಕಳೆದ ಆರು ತಿಂಗಳಲ್ಲಿ ಜೂನ್ 20ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2457 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಕೇವಲ ಜೂನ್ 1ರಿಂದ ಜೂ.20ರವರೆಗೆ 1246 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಜನವರಿಯಿಂದ ಇಲ್ಲಿವರೆಗೆ 109 ಜನರಲ್ಲಿ ಚಿಕೂನ್ ಗುನ್ಯಾ, ಐವರಲ್ಲಿ ಮಲೇರಿಯಾ ಪತ್ತೆಯಾಗಿದೆ. ನೆಗಡಿ, ಕೆಮ್ಮು, ಜ್ವರ ಒಳಗೊಂಡ ವೈರಲ್ ಫೀವರ್ 1500ಕ್ಕೂ ಹೆಚ್ಚು ಜನರಲ್ಲಿ ಕೂಡ ಕಾಣಿಸಿಕೊಂಡಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಹಾದೇವಪುರ ಹಾಗೂ ಪೂರ್ವ ವಲಯದಲ್ಲಿ ಹೆಚ್ಚಿನವರಲ್ಲಿ ಡೆಂಗ್ಯೂ ಜ್ವರ ಕಂಡುಬರುತ್ತಿದೆ. ದಕ್ಷಿಣ ವಲಯದಲ್ಲಿ ಹೆಚ್ಚಾಗಿ ಚಿಕೂನ್ ಗುನ್ಯಾ ಕಂಡುಬಂದಿದೆ ಎಂದು ಬಿಬಿಎಂಪಿ ಅಂಕಿ ಅಂಶಗಳು ತಿಳಿಸಿವೆ . ಈ ಪ್ರದೇಶಗಳಲ್ಲಿ ಕಟ್ಟಡ ಕಾಮಗಾರಿ ಹೆಚ್ಚಾಗಿ ನಡೆಯುತ್ತಿವುದು ನೀರು ನಿಲ್ಲಲು ಕಾರಣವಾಗಿದೆ. ಹೀಗಾಗಿ ಹೆಚ್ಚಿನವರಲ್ಲಿ ಡೆಂಗ್ಯೂ ಕಾಣಿಸಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ। ಸಯ್ಯದ್ ಮದನಿ ತಿಳಿಸಿದರು.
ಕಳೆದ ವರ್ಷ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಆರು ತಿಂಗಳ ಅವಧಿಯಲ್ಲಿ 1009 ಜನರನ್ನು ಡೆಂಗ್ಯೂ ಪರೀಕ್ಷೆ ಗೇ ಒಳಪಡಿಸಲಾಗಿತ್ತು. ಈ ವರ್ಷ ಇದೇ ಅವಧಿಯಲ್ಲಿ ಶೇ. 75ರಷ್ಟು ಪರೀಕ್ಷೆ ಹೆಚ್ಚಿಸಲಾಗಿದ್ದು , 4063 ಜನರನ್ನು ಪರೀಕ್ಷಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಡೆಂಗ್ಯೂ ಪಾಸಿಟಿವ್ ಶೇ. 40ರಷ್ಟು ಹೆಚ್ಚಾಗಿದೆ. ಆರೋಗ್ಯ ಇಲಾಖೆ ಸಲಹೆಯಂತೆ ಲಾರ್ವಾ ತಡೆಯಲು ಫಾಗಿಂಗ್, ಮನೆಗಳ ಸುತ್ತ ನೀರು ನಿಲ್ಲದಂತೆ ಜಾಗೃತಿ ಮೂಡಿಸುವುದು ಸೇರಿ ಇತರೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ। ಸಯ್ಯದ್ ಮದನಿ ಹೇಳಿದರು.
Post a comment
Log in to write reviews