ಬೆಂಗಳೂರು: ಟೀಮ್ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಪ್ರೇಯಿಂಗ್ 11 ಕಟ್ಟುವ ಸಂದರ್ಭದಲ್ಲಿ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅವರನ್ನು ಹೊರಗಿಟ್ಟ ಬಗ್ಗೆ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇದೀಗ ಕ್ಷಮೆ ಕೇಳಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದಿನೇಶ್ ಕಾರ್ತಿಕ್, ದಿಗ್ಗಜರಿರುವ ತಂಡ ಕಟ್ಟಿದ್ದರು. ಇದರ ಬೆನ್ನಲ್ಲೇ ಧೋನಿ ಫ್ಯಾನ್ಸ್ ಬೇಸರ ಹೊರಹಾಕಿರುವುದನ್ನು ಗಮನಿಸಿರುವ ಡಿ.ಕೆ, ತಮ್ಮಿಂದ ದೊಡ್ಡ ತಪ್ಪಾಗಿದೆ. ಧೋನಿ ಹೆಸರು ಸೇರಿಸಲು ಮರೆತಿದ್ದೇನೆ ಎಂದು ಇದೀಗ ಹೇಳಿಕೊಂಡಿದ್ದಾರೆ.
ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಕಿರೀಟ ಗೆದ್ದುಕೊಟ್ಟ ಕ್ಯಾಪ್ಟನ್ ಎಂಎಸ್ ಧೋನಿ ಅವರನ್ನು ತಮ್ಮ ಆಯ್ಕೆಯ ಶ್ರೇಷ್ಠ ಭಾರತೀಯ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟಿದ್ದರು.ಇದರ ಬಗ್ಗೆ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಇದೀಗ ಕ್ಷಮೆ ಕೇಳಿದ್ದಾರೆ.
ಒಬ್ಬ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿ, ಸಾರ್ವಕಾಲಿಕ ಶ್ರೇಷ್ಠ ತಂಡದ ರಚನೆ ಮಾಡುವಾಗ ವಿಕೆಟ್‌ಕೀಪರ್‌ಗೆ ಸ್ಥಾನ ಕೊಡದೆ ದೊಡ್ಡ ತಪ್ಪು ಮಾಡಿದ್ದೇನೆ ಎಂದು ಹೇಳಿಕೊಂಡಿರುವ ದಿನೇಶ್ ಕಾರ್ತಿಕ್, ಗೊತ್ತಿಲ್ಲದೆ ತಮ್ಮಿಂದ ದೊಡ್ಡ ತಪ್ಪು ನಡೆದುಹೋಗಿದೆ ಎಂದು ಅಭಿಮಾನಿಗಳಲ್ಲಿ ಕ್ಷಮೆ ಕೊರಿದ್ದಾರೆ. ಇನ್ನು ಡಿ.ಕೆ ಆಯ್ಕೆ ಮಾಡಿದ್ದ ತಂಡದಲ್ಲಿ 3ನೇ ಕ್ರಮಾಂಕ ಪಡೆದಿದ್ದ ಮಾಜಿ ನಾಯಕ ರಾಹುಲ್ ದ್ರಾವಿಡ್ ಸಾಂದರ್ಭಿಕ ವಿಕೆಟ್ ಕೀಪರ್ ಎಂಬುದು ಗಮನಾರ್ಹ. ಆದರೆ, ತಂಡದಲ್ಲಿ ಪರಿಣತ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇರಲಿಲ್ಲ.
"ಅಣ್ಣ ತಮ್ಮಂದಿರೇ ನನ್ನಿಂದ ದೊಡ್ಡ ತಪ್ಪಾಗಿದೆ. ಗೊತ್ತಿಲ್ಲದೇ ಆಗಿರುವ ದೊಡ್ಡ ತಪ್ಪಿದು. ಕಾರ್ಯಕ್ರಮದ ತುಣುಕು ಆಚೆ ಬಂದಾಗಲೇ ಆ ತಪ್ಪಿನ ಅರಿವು ನನಗಾಗಿದ್ದು. ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡುವಾಗ ಹಲವು ವಿಚಾರಗಳು ನನ್ನ ತಲೆಯಲ್ಲಿ ಓಡುತ್ತಿತ್ತು. ಆಗ ವಿಕೆಟ್‌ಕೀಪರ್ ಆಯ್ಕೆ ಮಾಡುವುದನ್ನೇ ಮರೆತಿದ್ದೇನೆ. ಅದೃಷ್ಟವಶಾತ್ ಪಾರ್ಟ್ ಟೈಮ್ ಕೀಪರ್ ರಾಹುಲ್ ದ್ರಾವಿಡ್ ಅದರಲ್ಲಿ ಇದ್ದಾರೆ. ಹೀಗಾಗಿ ಎಲ್ಲರೂ ನನ್ನ ಆಯ್ಕೆ ಶ್ರೇಷ್ಠ ತಂಡದಲ್ಲಿ ಪಾರ್ಟ್‌ಟೈಮ್ ಕೀಪರ್‌ಗೆ ಸ್ಥಾನ ನೀಡಿದ್ದೇನೆ ಅಂದುಕೊಂಡಿದ್ದಾರೆ. ಆದರೆ, ನಾನು ದ್ರಾವಿಡ್ ಅವರನ್ನು ವಿಕೆಟ್‌ಕೀಪರ್ ಎಂದು ಪರಿಗಣಿಸಿಯೇ ಇಲ್ಲ. ಒಬ್ಬ ವಿಕೆಟ್‌ಕೀಪರ್ ಆಗಿ ತಂಡಕ್ಕೆ ವಿಕೆಟ್‌ಕೀಪರ್‌ನ ಆಯ್ಕೆ ಮಾಡುವುದನ್ನು ಮರೆತಿದ್ದೇನೆ. ಇದು ಬಹುದೊಡ್ಡ ತಪ್ಪು," ಎಂದು ಕ್ರಿಕ್‌ಬಝ್ ಕಾರ್ಯಕ್ರಮದಲ್ಲಿ ಡಿ.ಕೆ ಕ್ಷಮೆ ಕೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಯಾವುದೇ ತಂಡಕ್ಕೆ ಎಂಎಸ್ ಧೋನಿ ಮೊದಲ ಆಯ್ಕೆ ಆಗುತ್ತಾರೆ. ಅವರಿಗೆ ನನ್ನ ತಂಡದಲ್ಲೂ 7ನೇ ಕ್ರಮಾಂಕ ಕೊಟ್ಟು ಕ್ಯಾಪ್ಟನ್ ಆಗಿ ನೋಡಲು ಬಯಸುತ್ತೇನೆ ಎಂದಿದ್ದಾರೆ. ಈ ಮೊದಲು ಕಟ್ಟಿದ್ದ ತಂಡದಲ್ಲಿ 7ನೇ ಕ್ರಮಾಂಕವನ್ನು ಆಲ್‌ರೌಂಡರ್ ರವೀಂದ್ರ ಜಡೇಜಾಗೆ ನೀಡಿದ್ದರು.
"ಇಲ್ಲಿ ಒಂದು ವಿಚಾರ ಸ್ಪಷ್ಟ ಪಡಿಸುತ್ತೇನೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ನಾನು ತಂಡ ಕಟ್ಟುವುದಾದರೆ ಅಲ್ಲಿ ಎಂಎಸ್ ಧೋನಿಗೆ ಖಾಯಂ ಸ್ಥಾನ ಇರುತ್ತದೆ. ಅವರು ಕ್ರಿಕೆಟ್ ಆಡಿದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬುದು ನನ್ನ ಅಭಿಪ್ರಾಯ. ಆ ತಂಡವನ್ನು ಮರು ರಚಿಸುವುದಾದರೆ, ಧೋನಿಗೆ 7ನೇ ಕ್ರಮಾಂಕ ಕೊಡುತ್ತೇನೆ. ಮತ್ತು ಅವರೇ ಆ ತಂಡದ ಕ್ಯಾಪ್ಟನ್ ಆಗಿರುತ್ತಾರೆ," ಎಂದು ಕಾರ್ತಿಕ್ ಹೇಳಿದ್ದಾರೆ.
Post a comment
Log in to write reviews