ನಕ್ಸಲರ ಬೆದರಿಕೆಗೆ ಹೆದರಿ ಸಾಂಪ್ರದಾಯಿಕ ವೈದ್ಯರಾಗಿರುವ ಹೇಮ ಚಂದ್ ಮಾಂಝಿ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂತಿರುಗಿಸಲು ಮುಂದಾಗಿದ್ದಾರೆ. ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಸಾಂಪ್ರದಾಯಿಕ ವೈದ್ಯ ಹೇಮ ಚಂದ್ ಮಾಂಝಿ ತಮಗೆ ಹೆಚ್ಚುತ್ತಿರುವ ಬೆದರಿಕೆಗಳಿಂದಾಗಿ ತಮ್ಮ ವೈದ್ಯಕೀಯ ಅಭ್ಯಾಸವನ್ನು ನಿಲ್ಲಿಸಲು ಯೋಜಿಸಿದ್ದಾರೆ. 72 ವರ್ಷದ ಹೇಮಚಂದ್ ಮಾಂಝಿ ಅವರು ಸಾಂಪ್ರದಾಯಿಕ ಔಷಧಕ್ಕೆ ನೀಡಿದ ಕೊಡುಗೆಗಳಿಗಾಗಿ ಕಳೆದ ತಿಂಗಳು ಭಾರತದ 4ನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.
ಆದರೆ, ಭಾನುವಾರ ರಾತ್ರಿ ನಕ್ಸಲರು ಚಮೇಲಿ ಮತ್ತು ಗೌರ್ದಂಡ್ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿದ್ದ 2 ಮೊಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಮಾಂಝಿಗೆ ಬೆದರಿಕೆ ಹಾಕುವ ಬ್ಯಾನರ್ ಮತ್ತು ಕರಪತ್ರಗಳನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ. ಕರಪತ್ರಗಳಲ್ಲಿ ಮಾಂಝಿಯವರು ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ವನ್ನು ಹಾಕಲಾಗಿತ್ತು.
ಸಾಂಪ್ರದಾಯಿಕ ವೈದ್ಯರಾಗಿರುವ ಹೇಮಚಂದ್ ಮಾಂಝಿ ಅವರು ಛೋಟೆಡೊಂಗರ್‌ನಲ್ಲಿನ ಆಯ್ಕೆಘಾಟಿ ಕಬ್ಬಿಣದ ಅದಿರು ಯೋಜನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತು ಅದಕ್ಕೆ ಅವರು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ನಕ್ಸಲರು ಆರೋಪಿಸಿದ್ದಾರೆ. ಆ ಆರೋಪಗಳನ್ನ ಮಾಂಝಿ ಅವರು ನಿರಾಕರಿಸಿದ್ದಾರೆ.
Post a comment
Log in to write reviews