A - ಅಗಾದವಾದ
P - ಪ್ರೀತಿಯಿಂದ
P - ಪೋಷಿಸುವ
A - ಅಭೂತಶಕ್ತಿ
ಅಪ್ಪ ಎಂದರೆ ಎಲ್ಲರಿಗೂ ಪ್ರೀತಿ. ಮಗುವಿಗೆ ಅಪ್ಪನೇ ಪ್ರಪಂಚ. ಆತನೇ ಸರ್ವಸ್ವ. ಅವನಿಲ್ಲದೆ ಮಕ್ಕಳ ಅಸ್ತಿತ್ವವೇ ಇಲ್ಲ.
ಅಪ್ಪ ಕುಟುಂಬದ ಅವಿಭಾಜ್ಯ ಅಂಗ. ತನ್ನ ಮಕ್ಕಳಿಗಾಗಿ ಸರ್ವಸ್ವವನ್ನ ತ್ಯಾಗ ಮಾಡುವ ಜೀವವದು. ಅಂತಹ ತಂದೆಗೆ ಧನ್ಯವಾದ ತಿಳಿಸಲು ನಿಮಗಿದು ಉತ್ತಮ ಅವಕಾಶ.
ನಾವು ಹುಟ್ಟಿದಾಗಿನಿಂದ ನಮ್ಮ ಶ್ರೇಯಸ್ಸಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಸುವ ಏಕೈಕ ಜೀವ ಅಂದರೆ ಅದು ಅಪ್ಪ. ತಾಯಿ ಜೀವವನ್ನ ಕೊಟ್ಟರೆ, ತಂದೆ ಜೀವನವನ್ನೇ ಕೊಡುತ್ತಾರೆ. ಮಕ್ಕಳಿಗಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುವ ಜೀವಗಳಲ್ಲಿ ತಾಯಿಯಷ್ಟೇ ತಂದೆಯು ಕೂಡ ಸಮಾನರು.
ಇಂತಹ ತಂದೆಗೆ ಧನ್ಯವಾದ ತಿಳಿಸಲು ವಿಶ್ವ ಅಪ್ಪಂದಿರ ದಿನಕ್ಕಿಂತ ಉತ್ತಮವಾದ ದಿನ ಮತ್ತೊಂದು ಇಲ್ಲ.
ಜಗತ್ತಿನ 52 ರಾಷ್ಟ್ರಗಳಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರ ಅಪ್ಪಂದಿರ ದಿನವನ್ನು ಆಚರಣೆ ಮಾಡಲಾಗುತ್ತದೆ. ಯುನೈಟೆಡ್ ಸ್ಟೇಟ್ ನಲ್ಲಿ 1908 ಜುಲೈ 5ರಂದು ನಡೆದ ಅಪಘಾತದಲ್ಲಿ ನೂರಾರು ಪುರುಷರು ಸಾವಿಗೀಡಿದ್ದರು. ಗ್ರೇಸ್ ಗೋಲ್ಡನ್ ಪ್ಲೇಟನ್ ಅಪಘಾತದಲ್ಲಿ ನಿಧನ ಹೊಂದಿದ ತನ್ನ ತಂದೆಯ ನೆನಪಿಗಾಗಿ ಪ್ರತಿ ವರ್ಷ ಜೂನ್ 3 ನೇ ಭಾನುವಾರ ಗೌರವ ಸೂಚಿಸಲು ಪ್ರಾರಂಭಿಸಿದಳು. ಕೆಲವು ವರ್ಷಗಳ ನಂತರ ಸೋನಾರ ಸ್ಮಾರ್ಟ್ ಡಾಡ್ ಎಂಬ ಮಹಿಳೆ ತನ್ನ ತಂದೆಯ ಗೌರವಾರ್ಥವಾಗಿ ತಂದೆಯ ದಿನಾಚರಣೆಯನ್ನು ಪ್ರಾರಂಭಿಸಿದರು. ಈ ಹಿನ್ನೆಲೆಯಲ್ಲಿ 1972ರಲ್ಲಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅಧಿಕೃತವಾಗಿ ಜೂನ್ 3ನೇ ಭಾನುವಾರವನ್ನ ತಂದೆಯ ದಿನವನ್ನಾಗಿ ಘೋಷಣೆ ಮಾಡಿದರು. ಅದರಂತೆ ಈ ವರ್ಷ ಜೂನ್ 16ರಂದು ವಿಶ್ವ ಅಪ್ಪಂದಿರ ದಿನವನ್ನ ಆಚರಣೆ ಮಾಡಲಾಗುವುದು.
ಅಮ್ಮ ಬದುಕಾದರೆ ಅಪ್ಪ ಆ ಬದುಕಿಗೆ ಭರವಸೆ. ಅಪ್ಪನ ಕೈ ಶ್ರಮ ಪಟ್ಟಾಗಲೇ ಮಕ್ಕಳ ಕೈ ಸುಂದರವಾಗಿ ಕಾಣುವುದು. ಅಮ್ಮ ತನ್ನ ಪ್ರೀತಿ, ಮಮತೆಯನ್ನು ತೋರಿಸಿ ಕೊಳ್ಳುತ್ತಾಳೆ. ಆದರೆ ಅಪ್ಪ ಹಾಗಲ್ಲ ಮೇಲ್ನೋಟಕ್ಕೆ ಏನು ತೋರಿಸಿಕೊಳ್ಳದಿದ್ದರೂ ಮನದೊಳಗೆ ಬೆಟ್ಟದಷ್ಟು ಪ್ರೀತಿ, ಮಮತೆ, ವಾತ್ಸಲ್ಯವನ್ನು ತುಂಬಿಕೊಂಡು ತನ್ನ ಜವಾಬ್ದಾರಿಗಳನ್ನ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಅವುಗಳನ್ನು ವ್ಯಕ್ತಪಡಿಸುತ್ತಾನೆ. ಆದರೆ ಅದು ಮಕ್ಕಳಾದ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟ.
ಒಬ್ಬ ತಂದೆಗೆ ತನ್ನ ಮಕ್ಕಳ ಮೇಲೆ ಅನೇಕ ಜವಾಬ್ದಾರಿಗಳು ಇರುತ್ತವೆ. ಅದಕ್ಕಾಗಿ ತನ್ನ ಬದುಕನ್ನು ಮುಡುಪಾಗಿಡುತ್ತಾನೆ. ತಾನು ಬಯಸಿದಂತೆ ಮಕ್ಕಳು ಉತ್ತಮ ವ್ಯಕ್ತಿಯಾಗಿ ಬೆಳೆದರೆ ಆ ತಂದೆಯ ಬದುಕಿಗೆ ಸಾರ್ಥಕತೆ ದೊರೆತಂತೆ.
ಅಪ್ಪನ ನಿರೀಕ್ಷೆಯಂತೆ ಅವನ ಮಾರ್ಗದರ್ಶನದಲ್ಲಿ ಸಾಗುತ್ತಾ ಅವರ ಜೀವನದ ಸಾರ್ಥಕತೆಗೆ ಮಕ್ಕಳಾಗಿ ನಾವೆಲ್ಲ ಇನ್ನು ಮುಂದೆ ಶ್ರಮಿಸೋಣ. ವಿಶ್ವದ ಎಲ್ಲ ಅಪ್ಪಂದಿರಿಗೂ ವಿಶ್ವ ಅಪ್ಪಂದಿರ ದಿನ ಶುಭಾಶಯಗಳು.
Post a comment
Log in to write reviews