ಸಿಲ್ಕ್ ಬೋರ್ಡ್ ಜಂಕ್ಷನ್‌ನ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಿದ ಡಬಲ್ ಡೆಕ್ಕರ್ ಫ್ಲೈಓವರ್
ಬೆಂಗಳೂರು: ಸಿಲಿಕಾನ್ ಸಿಟಿಯ ಸಿಲ್ಕ್ ಬೋರ್ಡ್ ಜಂಕ್ಷನ್ ಎಂದಾಕ್ಷಣ ಹಲವರು ಅಲ್ಲಿನ ಟ್ರಾಫಿಕ್ ಸಮಸ್ಯೆಯಿಂದ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಡಬಲ್ ಡೆಕ್ಕರ್ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದ ಬೆನ್ನಲ್ಲಿಯೇ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಜನರು ಧೈರ್ಯವಾಗಿ ಓಡಾಡಬಹುದು ಎಂದು ಹೇಳುತ್ತಿದ್ದಾರೆ.
ಜುಲೈ ತಿಂಗಳಲ್ಲಿ ಬೆಂಗಳೂರಿನ ಬಹು ನಿರೀಕ್ಷಿತ ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟನೆಯ ನಂತರ ಅತ್ಯಂತ ಜನಸಂದಣಿ ಹೊಂದಿರುವ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಕನಿಷ್ಠ 50 ಪ್ರತಿಶತದಷ್ಟು ಟ್ರಾಫಿಕ್ ಕಡಿತವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಪೂರ್ವ ವಿಭಾಗದ ಡೆಪ್ಯೂಟಿ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರ ಮಾಹಿತಿ ಪ್ರಕಾರ, ಬೆಳಿಗ್ಗೆ ಮತ್ತು ಪೀಕ್ ಅವರ್‌ಗಳಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ತಗ್ಗಿದೆ. ಹೊಸದಾಗಿ ನಿರ್ಮಿಸಿದ ಡಬಲ್ ಡೆಕ್ಕರ್ ಫ್ಲೈಓವರ್‌ನಿಂದಾಗಿ ವಾಹನಗಳ ಸಂಚಾರಕ್ಕೆ ಮುಕ್ತಗೊಂಡು ಟ್ರಾಫಿಕ್ ಪ್ರಮಾಣ ತಗ್ಗಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಬೈಪಾಸ್ ಮಾಡುವ ಮೂಲಕ ನಗರದ ವಿವಿಧ ಭಾಗಗಳಿಂದ ಹೊಸೂರು ರಸ್ತೆ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಮತ್ತು ರಾಗಿಗುಡ್ಡದಂತಹ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ 30-40 ನಿಮಿಷಗಳ ಉಳಿತಾಯ ಮಾಡಲಾಗಿದೆ.
ಬೆಂಗಳೂರಿನ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ 5.12 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು 449 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಮೆಟ್ರೋ ರೈಲು ಹಾಗೂ ವಾಹನ ಸಂಚಾರಕ್ಕೆ ರಸ್ತೆಯನ್ನು ಹೊಂದಿರುವ ಮೇಲ್ಸೇತುವೆಯಾಗಿದೆ. ಇದು ಐದು ವಿಭಿನ್ನ ರ‍್ಯಾಂಪ್‌ಗಳನ್ನು ಹೊಂದಿದೆ. ಮೂರು ರ‍್ಯಾಂಪ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಎರಡು ಡೌನ್ ರ‍್ಯಾಂಪ್‌ಗಳ ಕಾಮಗಾರಿ ಚಾಲ್ತಿಯಲ್ಲಿದೆ. ಇದು ದಕ್ಷಿಣ ಭಾರತ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಆಗಿದೆ. ಈ ಫ್ಲೈಓವರ್ ಮೂಲಕ ಹಾದು ಹೋಗುವ ಹಳದಿ ಲೈನ್ ಮೆಟ್ರೋ ಇನ್ನೂ ಕಾರ್ಯಾ ಆರಂಭವಾಗಿಲ್ಲ. ಆದರೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಾಹಿತಿ ಪ್ರಕಾರ ಡಿಸೆಂಬರ್ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
Post a comment
Log in to write reviews