ಮೈಸೂರು ಚಲೋಗೆ ಚಾಲನೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ನಗಾರಿ ಬಾರಿಸಿದ ಜಂಟಿ ದೋಸ್ತಿಗಳು !
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದು ಬಿಜೆಪಿ, ಜೆಡಿಎಸ್ ದೋಸ್ತಿಗಳ ಜಂಟಿ 'ಮೈಸೂರು ಚಲೋ' ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಇಂದಿನಿಂದ ಆಗಸ್ಟ್ 10ರವರೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ದೊಸ್ತಿಗಳ ಜಂಟಿ ಪಾದಯಾತ್ರೆಯ ವೇದಿಕೆ ಕಾರ್ಯಕ್ರಮವನ್ನು ಉಭಯ ಪಕ್ಷಗಳ ನಾಯಕರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.
ಕೆಂಗೇರಿಯ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 140 ಕಿ.ಮೀ.ಯ 8 ದಿನಗಳ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಇಂದು ಪಾದಯಾತ್ರೆ ಬಿಡದಿವರೆಗೆ ಸಾಗಲಿದೆ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಜೆಡಿಎಸ್ ಮುಖಂಡರಾದ ಬಂಡೆಪ್ಪ ಕಾಶಂಪೂರ, ಬೋಜೇಗೌಡ, ಜಿಟಿ ದೇವೇಗೌಡ ಉಪಸ್ಥಿತರಿದ್ದಾರೆ.
ವೇದಿಕೆಯ ಮೇಲೆ ಎರಡು ಪಕ್ಷಗಳ ಕೋರ್ ಕಮಿಟಿ ಸದಸ್ಯರು, ಸಂಸದರು ಸೇರಿ ಸುಮಾರು 45 ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ ಸೋಮಣ್ಣ ಭಾಗಿಯಾಗಿದ್ದಾರೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅಶ್ವತ್ಥ್ ನಾರಾಯಣ್, ಸಂಸದ ಗೋವಿಂದ ಕಾರಜೋಳ, ಸಂಸದ ಯಧುವೀರ್, ವಿಶ್ವೇಶ್ವರ್ ಹೆಗಡೆ ಕಾಗೇರಿ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಸುನಿಲ್ ಕುಮಾರ್, ಜನಾರ್ದನ ರೆಡ್ಡಿ ಉಪಸ್ಥಿತರಿದ್ದಾರೆ.
ನಿರ್ವಹಣೆಗೆ ವಿವಿಧ ಮೋರ್ಚಾಗಳ ಜೊತೆಗೆ ತಂಡಗಳು ರಚನೆಯಾಗಿವೆ. ಮೊದಲ ದಿನದ ಪಾದಯಾತ್ರೆಯನ್ನು ಯುವ ಮೋರ್ಚಾ ನಿರ್ವಹಿಸಲಿದೆ. ವಿಧಾನಸಭೆ ಕ್ಷೇತ್ರವಾರು 200 ಜನರು ಸೇರಿ ಪ್ರತಿದಿನ ಐದಾರು ಸಾವಿರ ಜನರು ಭಾಗಹಿಸಲಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್ ಸದಸ್ಯರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳ ಮುಖಂಡರು, ಪದಾಧಿಕಾರಿಗಳು ಏಳು ದಿನವೂ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆಯ ಯಶಸ್ಸಿಗೆ 20 ರಿಂದ 22 ವಿಭಾಗಗಳನ್ನು ರಚಿಸಲಾಗಿದೆ ಎನ್ನಲಾಗಿದೆ. ಆಗಸ್ಟ್ 10ರಂದು ಬೆಳಗ್ಗೆ 10.30ಕ್ಕೆ ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
Post a comment
Log in to write reviews