ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ: ಎ.ಎಂ ಪ್ರಸಾದ್ ಮತ್ತು ಪ್ರಣಬ್ ಮೊಹಂತಿಗೆ ಸುಪ್ರೀಂಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ
ನವದೆಹಲಿ: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್ ಮತ್ತು ಪ್ರಣಬ್ ಮೊಹಂತಿಗೆ ಸುಪ್ರೀಂಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ.
ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಕೆ.ಜೆ ಜಾರ್ಜ್ ಪಾತ್ರವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಸಿಬಿಐ ಹಾಗೂ ಸಿಐಡಿ ತನಿಖಾ ತಂಡಗಳು ಬಿ ರಿಪೋರ್ಟ್ನಲ್ಲಿ ಕೆ.ಜೆ ಜಾರ್ಜ್ ಅವರ ಪಾತ್ರವಿಲ್ಲ ಎಂದು ತನಿಖಾ ವರದಿಯಲ್ಲಿ ತಿಳಿಸಿದ್ದರು. ಈ ಸಂಬಂಧ ಕೆ.ಜೆ. ಜಾರ್ಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರತಿವಾದಿಗಳ ದೂರನ್ನು ತಳ್ಳಿಹಾಕಿತ್ತು.
ಹೈಕೋರ್ಟ್ ಆದೇಶದ ವಿರುದ್ಧ ಗಣಪತಿಯವರ ಸಹೋದರಿ ಸಬೀತಾ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾ.ಬೇಲಾ ಎಂ.ತ್ರಿವೇದಿ ನೇತೃತ್ವದ ದ್ವಿ ಸದಸ್ಯ ಪೀಠ ಅರ್ಜಿಯನ್ನು ವಜಾ ಮಾಡಿ, ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.
ಮಂಗಳೂರು ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿದ್ದ ಗಣಪತಿಯವರು ಮೂಲತಃ ಕೊಡಗಿನವರು. ಅವರು 2016 ಜುಲೈ 7 ರಂದು ಮಡಿಕೇರಿಯ ವಿನಾಯಕ ಲಾಡ್ಜ್ ಕೊಠಡಿ ಸಂಖ್ಯೆ 315ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ಕೊಡಗಿನ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದ ಗಣಪತಿ ಅವರು, ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ನನ್ನ ಸಾವಿಗೆ ಈ ಮೂವರೇ ಕಾರಣ ಎಂದು ಹೇಳಿದ್ದರು.
Post a comment
Log in to write reviews