ರಾಜ್ಯದಲ್ಲಿ ಚುನಾವಣಾ ಬೆಟ್ಟಿಂಗ್ ಕಾವು: ಪೆನ್ ಡ್ರೈವ್ ಪ್ರಜ್ವಲ್ ಹಾಟ್ ಫೇವರೀಟ್! ಎಚ್ಡಿಕೆ, ಡಿಕೆಸು ಮೇಲೂ ಹೂಡಿಕೆ
ಮತ ಎಣಿಕೆಗೆ ಇನ್ನು ಕೇವಲ ಐದು ದಿನಗಳು ಬಾಕಿ ಇರುವಂತೆಯೇ ರಾಜ್ಯದಲ್ಲಿ ಯಾರು, ಯಾರು ಗೆಲ್ಲುತ್ತಾರೆ, ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಬರುತ್ತದೆ ಎಂಬ ಚರ್ಚೆಗಳು ಬಿರುಸು ಪಡೆದುಕೊಂಡಿದ್ದು, ಬೆಟ್ಟಿಂಗ್ ಕಾವು ಜೋರಾಗಿದೆ. ಬುಕ್ಕಿಗಳ ಪ್ರಕಾರ ಪೆನ್ಡ್ರೈವ್ ಪ್ರಕರಣದ ಪ್ರಜ್ವಲ್ ಗೆಲ್ಲುತ್ತಾರೆ ಎಂದು ಅತ್ಯಂತ ಹೆಚ್ಚಿನ ಹೂಡಿಕೆಯಾಗಿದ್ದು, ನಂತರದ ಸ್ಥಾನದಲ್ಲಿ ಎಚ್ಡಿಕೆ, ಡಿ.ಕೆ.ಸುರೇಶ್ ಇದ್ದಾರೆ.
ರಾಜ್ಯದಲ್ಲಿ ಎರಡು ಹಂತದ ಚುನಾವಣೆ ಈಗಾಗಲೆ ಮುಗಿದಿದೆ ದೇಶದಲ್ಲಿ ಇನ್ನು ಒಂದು ಹಂತದ ಚುನಾವಣೆ ಬಾಕಿ ಇದೆ. ಈ ಮದ್ಯೆ ಕ್ರಿಕೆಟ್ ಜ್ವರ ಕಡಿಮೆಯಾಗಿ, ಚುನಾವಣಾ ಫಲಿತಾಂಶದ ಮೇಲೆ ಬೆಟ್ಟಿಂಗ್ ಜೋರಾಗಿದೆ.
ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಷ್ಟು ಕ್ಷೇತ್ರ ಗೆಲ್ಲಲಿದೆ, ಬಿಜೆಪಿ ಕಳೆದುಕೊಳ್ಳಲಿರುವ ಕ್ಷೇತ್ರಗಳ ಬಗ್ಗೆಯೂ ಬೆಟ್ಟಿಂಗ್ ಜೋರಾಗಿದೆ. ಕಳೆದ ಬಾರಿ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಗೆ ಈ ಬಾರಿ ಎಷ್ಟು ಸ್ಥಾನ ಹೆಚ್ಚುವರಿಯಾಗಿ ಧಕ್ಕಲಿದೆ ಎಂಬ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆದಿದೆ. ಇದರ ಮದ್ಯೆ ಜೆಡಿಎಸ್ ಮೂರು ಸ್ಥಾನ ಉಳಿಸಿಕೊಳ್ಳಲಿದೆಯೇ.? ಕುಮಾರಸ್ವಾಮಿ ಸೋಲುತ್ತಾರೆ ಎಂಬ ಬಗ್ಗೆಯೂ ಚರ್ಚೆಯಾಗಿತ್ತಿದ್ದು, ಬೆಟ್ಟಿಂಗ್‌ಗೆ ಹಣವಲ್ಲದೆ ಕುರಿ, ಕೋಳಿ, ಮೇಕೆ ಅಲ್ಲದೆ ಪಾರ್ಟಿ ಕೊಡಿಸುವುದು, ವಿದೇಶಿ ಟ್ರಿಪ್ ಸೇರಿದಂತೆ ಹಲವಾರು ಬಾಜಿಗಳು ಅಖಾಡದಲ್ಲಿದೆ.
ಹಾಸನದ ಲೋಕಸಭೆಯ ಜೆಡಿಎಸ್ ಅಭ್ಯಥಿ೯ ಪೆನ್ಡ್ರೈವ್ ಪ್ರಕರಣದಲ್ಲಿ ಕುಖ್ಯಾತಿ ಗಳಿಸಿರುವ ಪ್ರಜ್ವಲ್ ಇನ್ನು ವಿದೇಶದಿಂದ ಬಂದಿಲ್ಲ. ಬರುವ ಬಗ್ಗೆ ಹಲವು ಅನುಮಾನಗಳೂ ಇದೆ. ಈಗಾಗಲೇ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆದಿತ್ತು. ಜೆಡಿಎಸ್ ಅಭ್ಯಥಿ೯ ಪ್ರಜ್ವಲ್ ಚುನಾವಣೆ ನಡೆದ ರಾತ್ರಿಯೇ ವಿದೇಶಕ್ಕೆ ಪರಾರಿಯಾಗಿದ್ದಾನೆ. ಈ ಮಧ್ಯೆ ಪೆನ್ ಡ್ರೈವ್ ಪ್ರಕರಣ ಸ್ಪೋಟಗೊಂಡಿದ್ದು, ಸಂತ್ರಸ್ತ್ರ ಮಹಿಳೆಯರ ಹೇಳಿಕೆ, ಎಸ್ಐಟಿ ತನಿಖೆ, ತಂದೆ ಎಚ್.ಡಿ.ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಮಧ್ಯೆ ಹಾಸನ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದ್ದು, ಬಿಜೆಪಿಯ ಮತಗಳು ಜೆಡಿಎಸ್ ಕಡೆ ವಾಲಿರುವುದರಿಂದ ಗೆಲುವು ನಿಚ್ಚಳವಾಗಿದೆ ಎನ್ನಲಾಗಿದೆ.
ಇದು ಬುಕ್ಕಿಗಳಿಗೆ ಅನುಕೂಲವಾಗಿ ಪರಿಗಣಿಸಿದೆ. ಹೆಚ್ಚಿನ ಮತವಾಗಿರುವುದರಿಂದ ಹಾಗೂ ಚುನಾವಣೆ ನಂತರ ಪೆನ್ಡ್ರೈವ್ ಪ್ರಕರಣ ಹೊರಬಿದ್ದಿದ್ದರಿಂದ, ಪ್ರಜ್ವಲ್ ಪಡೆಯಲಿರುವ ಮತಗಳ ಮೇಲೆ ಇರುವ ಪರಿಣಾಮ ಬೀರಿದಂತಿಲ್ಲ. ಆನಂತರ ಪ್ರಕರಣ ದೊಡ್ಡ ಸದ್ದು ಮಾಡುತ್ತಿದ್ದರೂ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಜೆಡಿಎಸ್‌ನ ಪ್ರಜ್ವಲ್ ಗೆಲುವು ನಿಚ್ಚಳವಾಗಿದೆ ಎಂಬ ವಾದವಿದೆ. ಹೀಗಿದ್ದರೂ ಮಾಜಿ ಪ್ರಧಾನಿಗಳ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಡೆಯೂ ಕೂಡ ಜಿದ್ದಾಜಿದ್ದಿನಿಂದ ಕಣದಲ್ಲಿತ್ತಾದರೂ, ತಂತ್ರಕ್ಕೆ ಪ್ರತಿತಂತ್ರ ಜೆಡಿಎಸ್ ಹೂಡಿದೆ. ಈ ಕಾರಣದಿಂದಾಗಿ ಪ್ರಜ್ವಲ್ ಗೆದ್ದೇ ಗೆಲ್ಲುತ್ತಾರೆ ಎಂಬುದು ಜೆಡಿಎಸ್ ಅಭಿಮಾನಿಗಳು ಹಾಗೂ ಬುಕ್ಕಿಗಳ ವಾದ. ಹೀಗಾಗಿ ಪ್ರಜ್ವಲ್ ಮೇಲೆ ಹಾಸನ ಸೇರಿದಂತೆ ಇತರೆಡೆಯೂ ಹಣ ಹೂಡಿಕೆ ಮಾಡಲಾಗಿದೆ. ಈ ಮಧ್ಯೆ ಪ್ರಜ್ವಲ್ ಸೋಲುತ್ತಾನೆ ಎಂದು ಬೆಟ್ಟಿಂಗ್ ಕಟ್ಟಿದ್ದರೂ ಅದರ ಪ್ರಮಾಣ ಹೆಚ್ಚಿಲ್ಲ. ಹೀಗಿದ್ದರೂ ಪ್ರಜ್ವಲ್ ಗೆದ್ದೇಗೆಲ್ಲುತ್ತಾರೆ ಎಂದು ಒಂದಕ್ಕೆ ಎರಡು(1%2) ಬೆಟ್ಟಿಂಗ್ ಪ್ರಮಾಣವಿದೆ.
ಮಾಜಿ ಸಿಎಂ ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರ ಪ್ರತಿಷ್ಠಿತ ಕ್ಷೇತ್ರವಾಗಿದೆ. ಆಡಳಿತಾರೂಢ ಕಾಂಗ್ರೆಸ್ ಮಂಡ್ಯ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿತ್ತಲ್ಲದೆ, ಅಲ್ಲಿನ ಅಭ್ಯರ್ಥಿಯೂ ಕೂಡ ಸ್ಥಳೀಯರಾಗಿರುವುದು ಕೂಡ ಪಕ್ಷಕ್ಕೆ ಪೂರಕವಾಗಿದೆ. ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸ್ಫರ್ಧಿಸಿರುವುದು ಮಂಡ್ಯದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹಾಗೂ ಜಾತಿ ಪ್ರಭಾವವೂ ಜೆಡಿಎಸ್ ಪರವಾಗಿದೆ. ಹೀಗಾಗಿ ಅವರು ಗೆದ್ದೇಗೆಲ್ಲುತ್ತಾರೆ ಎಂಬುದು ಒಂದು ಲೆಕ್ಕಚಾರವಾದರೆ, ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸೋಲೇ ಇಲ್ಲ ಎಂಬುದು ಕೂಡ ಜೆಡಿಎಸ್ ಲೆಕ್ಕಾಚಾರವಾಗಿದೆ. ಮಂಡ್ಯ, ಮೈಸೂರು ಭಾಗದಲ್ಲಿ ಬಾಡೂಟ, ಪಾರ್ಟಿ ಕೊಡಿಸುವುದು, ಟ್ರ್ಯಾಕ್ಟರ್, ಜಮೀನು, ಮತ್ತು ನಿವೇಶನಗಳನ್ನ ಬಾಜಿ ಕಟ್ಟಿದ್ದಾರೆ. ಬುಕ್ಕಿಗಳ ಪ್ರಕಾರ ಕುಮಾರಸ್ವಾಮಿ ಕಡೆ ಹೆಚ್ಚಿನ ಒಲವಿದ್ದು ಸಮ ಪ್ರಮಾಣದ ಬೆಟ್ಟಿಂಗ್ ಹೂಡಿಕೆಯಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಲ್ಲ ಬುಕ್ಕಿಗಳ ಕೇಂದ್ರ ಬಿಂದುವಾಗಿದೆ. ಕಳೆದ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದಿದ್ದು ಇದೊಂದೇ ಕ್ಷೇತ್ರದಿಂದ. ಈ ಬಾರಿ ಬಿಜೆಪಿಯಿಂದ ಡಾ.ಮಂಜುನಾಥ್ ಕಣಕ್ಕಿಳಿದಿರುವುದು ಕೂಡ ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿಣಮಿಸಿದೆ. ಇಲ್ಲಿ ಕಾಂಗ್ರೆಸ್‌ನ ಸುರೇಶ್ ಗೆಲುವು ನಿರಾಯಾಶ ಎಂಬ ಲೆಕ್ಕಾಚಾರವಿದ್ದರೂ, ಬಿಜೆಪಿ ಜೆಡಿಎಸ್ ನ ಪ್ರಭಾವ ಅಲ್ಲಗಳೆಯುವಂತಿಲ್ಲ. ಹೀಗಾಗಿ ಡಿಕೆಶಿ ಗೆದ್ದೇಗೆಲ್ಲುತ್ತಾರೆ ಎಂದು ಹೆಚ್ಚಿನ ಹೂಡಿಕೆಯಾಗಿದ್ದರೂ, ಸಮ ಪ್ರಮಾಣದ ಬೆಟ್ಟಿಂಗ್ ನಡೆದಿದೆ. ಇಲ್ಲಿ ಜೆಡಿಎಸ್ ಬಿಜೆಪಿ ಒಂದಾಗಿ ಹೆಚ್ಚಿನ ಮತಗಳು ಮಂಜುನಾಥ್ ಪರ ಬಂದಿದೆ ಎನ್ನಲಾಗುತ್ತಿದ್ದರೂ, ಡಿಕೆ ಅಬ್ಬರ ಇಲ್ಲಿ ಜೋರಾಗಿಯೇ ಇದೆ. ಹೀಗಿದ್ದರೂ ಮಂಜುನಾಥ್ ಗೆಲ್ಲುತ್ತಾರೆ ಎಂದು ಕಡಿಮೆ ಹೂಡಿಕೆಯಾಗಿದ್ದು, ಸುರೇಶ್ ಅವರು ಬುಕ್ಕಿಗಳ ಹಾಟ್ ಫೇವರೀಟ್ ಆಗಿದ್ದಾರೆ.
ಉಳಿದಂತೆ ಸಚಿವರ ಮಕ್ಕಳು ಸ್ಪರ್ಧಿಸಿರುವ ಕ್ಷೇತ್ರದಲ್ಲೂ ಬೆಟ್ಟಿಂಗ್ ಕಾವು ಜೋರಾಗಿದೆ. ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆಂದು ಹೂಡಿಕೆಯಾಗಿದೆ. ಬೆಳಗಾವಿ, ಕಲಬುರಗಿ, ಚಿಕ್ಕೋಡಿ, ಹಾವೇರಿ ಕ್ಷೇತ್ರಗಳ ಅಭ್ಯರ್ಥಿಗಳ ಮೇಲೂ ಹೂಡಿಕೆಯಾಗಿದ್ದು, ಕಾಂಗ್ರೆಸ್, ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆಯಲಿದೆ ಎನ್ನವುದರ ಮೇಲೂ ಬೆಟ್ಟಿಂಗ್ ನಡೆದಿದೆ.
ಸಂಚಿತಾ ತೀರ್ಥಹಳ್ಳಿ ಡಿಜಿಟಲ್ ಸಮಯ ನ್ಯೂಸ್
Post a comment
Log in to write reviews