ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪರೀಕ್ಷೆ ಮುಗಿಸಿದ ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆ ಮಾಡಿದೆ. ಕಳೆದ 25 ವರ್ಷಗಳ ಇತಿಹಾಸದಲ್ಲಿಯೇ ಪರೀಕ್ಷೆ ಪ್ರಕಟಣೆಯಲ್ಲಿ ಈ ವಿಶಿಷ್ಟ ದಾಖಲೆ ಸೃಷ್ಟಿಯಾಗಿದೆ.
ಗುರುವಾರ (ಮೇ 30) ಅಂತಿಮ ವರ್ಷದ ಬಿಇ, ಬಿ.ಟೆಕ್, ಬಿ.ಆರ್ಕ್, ಬಿ.ಪ್ಲಾನ್ ಅಂತಿಮ ಸೆಮಿಸ್ಟರ್ ಪರೀಕ್ಷೆ ನಡೆದಿದ್ದವು. ಒಟ್ಟು 42,323 ವಿದ್ಯಾರ್ಥಿಗಳು ಹಾಜರಾಗಿ, ಸಂಜೆ 5.30ಕ್ಕೆ ಪರೀಕ್ಷೆ ಮುಗಿಸಿದ್ದರು. ರಾತ್ರಿ 8.30ಕ್ಕೆ ಎಲ್ಲ ಫಲಿತಾಂಶ ಪ್ರಕಟಿಸುವುದರ ಜೊತೆಗೆ ಎಲ್ಲಾ ವಿದ್ಯಾರ್ಥಿಗಳ ವಾಟ್ಸ್ ಆ್ಯಪ್ ಸಂಖ್ಯೆಗೆ ಫಲಿತಾಂಶ ರವಾನಿಸಲಾಗಿರುವುದು ದಾಖಲೆಯಾಗಿದೆ.
ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಇಂಥ ಪ್ರಯೋಗ ಹಿಂದೆ ಎಲ್ಲಿಯೂ ನಡೆದಿಲ್ಲ. ಪರೀಕ್ಷೆ ಮುಗಿದ ದಿನವೇ ಎಲ್ಲ 42,323 ವಿದ್ಯಾರ್ಥಿಗಳ ಫಲಿತಾಂಶವನ್ನು ನೀಡಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ. ಎಸ್.ವಿದ್ಯಾಶಂಕರ ತಿಳಿಸಿದ್ದಾರೆ.
ಫಲಿತಾಂಶ ಶೀಘ್ರವೇ ಪ್ರಕಟಿಸುವುದರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳ ವಿಭಾಗದಲ್ಲಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ವಿದ್ಯಾಭ್ಯಾಸಕ್ಕೆ ಮತ್ತು ಮುಂದಿನ ಭವಿಷ್ಯಕ್ಕೆ ತುಂಬಾ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವಿಟಿಯುದಲ್ಲಿ ಆಡಳಿತ, ಶೈಕ್ಷಣಿಕ, ಪರೀಕ್ಷೆ, ಸಂಶೋಧನಾ ವಿಭಾಗದಲ್ಲಿ ಕ್ರಾಂತಿಕಾರಕ ಸುಧಾರಣೆ ತಂದು ಈ ಸಾಧನೆ ಮಾಡಿದೆ. ವಿಟಿಯು ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲೂ ಈ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದು, ಎಲ್ಲಾ ಸೆಮಿಸ್ಟರ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಪದವಿ ಯಶಸ್ವಿಯಾಗಿ ಮುಗಿಸಿದ ವಿದ್ಯಾರ್ಥಿಗಳು ಪ್ರೊವಿಜನಲ್ ಪದವಿ ಸರ್ಟಿಫಿಕೇಟ್‌ಗಳನ್ನು (ಪಿಡಿಸಿ) ಜೂನ್ 3ರಿಂದ ಆನ್‌ಲೈನ್ ಮೂಲಕ ನೀಡಲಾಗುವುದು ಎಂದು ಕುಲಪತಿ ತಿಳಿಸಿದರು.
Post a comment
Log in to write reviews