ಸಿಡಿಮದ್ದು ತಾಲೀಮಿನ ಪರೀಕ್ಷೆಯನ್ನು ಗೆದ್ದು ಜಂಬೂ ಸವಾರಿಗೆ ಸಿದ್ಧವಾದ ಗಜಪಡೆ & ಅಶ್ವಪಡೆ
ಮೈಸೂರು: ದಸರಾ ಮಹೋತ್ಸವ-2024ರ ಜಂಬೂಸವಾರಿ ನಡೆಯಲಿದ್ದು, ಈ ಜಂಬೂಸವಾರಿಗೆ ವಸ್ತು ಪ್ರದರ್ಶನ ಪಾರ್ಕಿಂಗ್ ಸ್ಥಳದಲ್ಲಿ ಅಶ್ವಪಡೆ ಹಾಗೂ ಗಜಪಡೆಗೆ ಸಿಡಿಮದ್ದು ತಾಲೀಮಿನ 3ನೇ ಹಾಗೂ ಅಂತಿಮ ತಾಲೀಮು ತರಬೇತಿ ನಡೆಸಲಾಯಿತು. ಇದರಲ್ಲಿ ಗಜಪಡೆ ಮತ್ತು ಅಶ್ವಪಡೆಗಳು ಪಾಸಾಗಿ ಜಂಬೂ ಸವಾರಿ ಮೆರವಣಿಗೆಗೆ ಸಿದ್ಧಗೊಂಡಿವೆ. ಈ ತಾಲೀಮಿನಲ್ಲಿ ಹಿರಿಯ ಆನೆ ವರಲಕ್ಷ್ಮೀ ಹೊರತುಪಡಿಸಿ 13 ಆನೆಗಳು ಭಾಗವಹಿಸಿದ್ದವು. ಇದರ ಜೊತೆಗೆ ಅಶ್ವದಳದ 30 ಕುದುರೆಗಳಿದ್ದವು. ಮೂರು ಬಾರಿ 21 ಕುಶಾಲತೋಪುಗಳನ್ನು ಸಿಡಿಸಲಾಯಿತು. ಕುಶಾಲತೋಪು ಸಿಡಿಸಲು 7 ಫಿರಂಗಿಗಳನ್ನು ಬಳಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿ ಭಾಗವಹಿಸಿದ್ದರು.
ಮುಖ್ಯ ಅರಣ್ಯಾಧಿಕಾರಿ ಡಾ.ಮಾಲತಿ ಪ್ರಿಯ ಮಾತನಾಡಿ, "ಶ್ರೀರಂಗಪಟ್ಟಣ ದಸರಾ ಮೆರವಣಿಗೆಗೆ ಎಲ್ಲ ಆನೆಗಳು ಆರೋಗ್ಯವಾಗಿವೆ. ಮರದ ಅಂಬಾರಿ ಹೊರಲು ಮಹೇಂದ್ರ ಆನೆ ಹಾಗೂ ಕುಮ್ಕಿ ಆನೆ ಹಿರಣ್ಯ ಮತ್ತು ಲಕ್ಷ್ಮಿ ಆನೆಯನ್ನು ಆಯ್ಕೆ ಮಾಡಲಾಗಿದೆ" ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, "ಜಂಬೂ ಸವಾರಿ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ಗಜಪಡೆ ಹಾಗೂ ಅಶ್ವದಳ ಭಾಗವಹಿಸಲಿದ್ದು, ಜಂಬೂ ಸವಾರಿ ಸಂದರ್ಭದಲ್ಲಿ ಶಬ್ದಕ್ಕೆ ಹೆದರದಂತೆ ಇಂದು ಅಂತಿಮ ಹಂತದ ತಾಲೀಮು ನಡೆಸಲಾಯಿತು" ಎಂದು ಹೇಳಿದರು.
Post a comment
Log in to write reviews