ಮೂಡಾ ಹಗರಣದಲ್ಲಿ ಸಿದ್ದರಾಮಯ್ಯ, ಮತ್ತವರ ಕುಟುಂಬದ ಪಾತ್ರವಿದೆ: ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಮೂಡಾ ಹಗರಣದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಪಾತ್ರವೇ ಇಲ್ಲ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ದಾಖಲೆ ಸಮೇತವೇ ಉತ್ತರ ನೀಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವ ಮೂಡಾ ಪ್ರಸ್ತಾವನೆಯನ್ನು ನಿರಾಕರಿಸಿ ಬದಲಿ ಜಮೀನನ್ನೇ ನೀಡುವಂತೆ ಒತ್ತಾಯ ಮಾಡಿರುವ ದಾಖಲೆಯನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ನನ್ನ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆಯೂ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ. ನೀವು ಸ್ವಯಂಘೋಷಿತ ವಕೀಲರಲ್ಲವೇ? ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ ಎಂದು ದಾಖಲೆಯನ್ನು ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿದ್ದಾರೆ.
"50:50ರ ಅನುಪಾತದಲ್ಲಿಯೇ ಮೂಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ 'ಒತ್ತಾಯ' ಮಾಡಿದ್ದಾರೆ! ಹಾಗೂ "ಅರ್ಜಿದಾರರಾದ ಶ್ರೀಮತಿ ಪಾರ್ವತಮ್ಮ ಇವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ತಿಳಿಸಲಾಗಿತ್ತು. ಆದರೆ ಪ್ರಾಧಿಕಾರದ ಈ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನು ನೀಡುವಂತೆ ಒತ್ತಾಯಿಸಿರುತ್ತಾರೆ." ಇದು ಮೂಡಾ ದಾಖಲೆಯಲ್ಲಿರುವ ಒಕ್ಕಣೆ. ಇದಕ್ಕೆ ತಾವು ಏನಂತೀರಿ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
Post a comment
Log in to write reviews