ಬೆಂಗಳೂರು: ಖ್ಯಾತ ನಿರೂಪಕಿ ಅಪರ್ಣಾ ಅವರು ಕ್ಯಾನ್ಸರ್ ಕಾಯಿಲೆಯಿಂದ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್‌ನಿಂದ ಬಳಸುತ್ತಿದ್ದ ಅಪರ್ಣಾ ಅವರು ಶುಕ್ರವಾರ ರಾತ್ರಿ ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತಿ ಹಾಗೂ ಖ್ಯಾತ ಲೇಖಕ ನಾಗರಾಜ ವಸ್ತಾರೆ ಸೇರಿದಂತೆ ಅನೇಕ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.
ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಯುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು.
ಕಿರಿತೆರೆಯ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಅಪರ್ಣಾ ನಡೆಸಿಕೊಟ್ಟಿದ್ದರು. ನಮ್ಮ ಮೆಟ್ರೋ ಅನೌನ್ಸ್ಮೆಂಟ್ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು. ಬೆಂಗಳೂರು ದೂರದರ್ಶನದಲ್ಲಿ ಸಿನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿಯೂ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು.
ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ಅಪರ್ಣಾ ಅವರು ನಿರೂಪಿಸಿದರು. ನಂತರ ಭಾರತ ಸರ್ಕಾರದ ‘ವಿವಿಧ ಭಾರತಿ’ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಸತತ ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಬಹುಮುಖ ಪ್ರತಿಭೆಯಾಗಿ ಮನೆಮಾತಾಗಿದ್ದ ಕಲಾವಿದೆ ಅಪರ್ಣಾ ಅವರು ಬಹುಬೇಗ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ.
Post a comment
Log in to write reviews