ವಿಜಯಪುರ: ಕಳೆದ ಅಕ್ಟೋಬರ್ 7 ಹಾಗೂ 8 ರಂದು ವಿಜಯಪುರ ಜಿಲ್ಲೆಗೆ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ, ವಕ್ಫ್ ಅದಾಲತ್ ನಡೆಸಿ ವಕ್ಫ್ ಆಸ್ತಿಗಳ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದರು. ನಂತರ ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ವಕ್ಫ್ ಆಸ್ತಿಗಳ ಖಾತಾ ಆಗದೇ ಇರುವ ಆಸ್ತಿಗಳ ಖಾತೆಗಳನ್ನು ಮುಂದಿನ 30 ದಿನಗಳಲ್ಲಿ ಮಾಡಬೇಕೆಂದು ಸೂಚನೆ ನೀಡಿದರು. ಇದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ಜಿಲ್ಲಾದ್ಯಂತ ತಾಳಿಕೋಟೆ, ತಿಕೋಟ, ಹೊನವಾಡ, ಬಬಲೇಶ್ವರ, ದೇವರಹಿಪ್ಪರಗಿ, ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ರೈತರಿಗೆ ನೋಟಿಸ್ ನೀಡಲಾಗಿದ್ದು, ನಿಮ್ಮ ಜಮೀನು ವಕ್ಫ್ ಆಸ್ತಿ ಇದ್ದು, ಕಾಲಂ ನಂಬರ್ 11 ರಲ್ಲಿ ಕರ್ನಾಟಕ ವಕ್ಫ್ ಬೋರ್ಡ ಹೆಸರು ಸೇರಿಸಲಾಗ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇದರಿಂದ ಇದೀಗ ರೈತರು ತಮ್ಮ ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸಚಿವ ಜಮೀರ್ ಅಹ್ಮದ್ ವಿರುದ್ಧ ಜಿಲ್ಲೆಯಲ್ಲಿ ಆಕ್ರೋಶ ಹೆಚ್ಚಾಗಿದ್ದು, ಸಚಿವರ ಆದೇಶದ ಬಳಿಕ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರಿಂದ ಬೃಹತ್ ಹೋರಾಟ ನಡೆದಿತ್ತು. ಇದರ ಬೆನ್ನಲ್ಲೆ ವಕ್ಫ್ ಕಾಯ್ದೆ ವಿರುದ್ಧ ಜಿಲ್ಲೆಯ ರೈತ ಸಂಘಟನೆಗಳಾದ ಕರ್ನಾಟಕ ಹಸಿರು ಸೇನೆ, ರಾಜ್ಯ ರೈತ ಸಂಘ ಹೋರಾಟಕ್ಕೆ ಮುಂದಾಗಿವೆ.
ಭೂಮಿ ಕಳೆದುಕೊಳ್ಳುತ್ತಿರುವ ರೈತರ ಬೆನ್ನಿಗೆ ಜಿಲ್ಲೆಯ ರೈತ ಸಂಘಟನೆಗಳು ನಿಂತುಕೊಂಡಿವೆ. ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಹೋರಾಟ ನಡೆಸುತ್ತಿವೆ. ವಕ್ಫ್ ಕಾಯ್ದೆ ರೈತರ ವಿರುದ್ಧದ ಹುನ್ನಾರ. ಸರ್ಕಾರವೇ ವಕ್ಪ ಬೋರ್ಡ್ ಮೂಲಕ ರೈತರನ್ನ ಬೆದರಿಸುತ್ತಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಜಿಲ್ಲಾಧಿಕಾರಿ ಟಿ ಭೂಬಾಲನ್ ಹಾಗೂ ಕಂದಾಯ ಸಚಿವರಿಗೆ ರೈತ ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ. ರೈತರ ಹೋರಾಟ ಜೋರಾಗುತ್ತಿದಂತೇಯೆ ವಿಜಯಪುರ ಜಿಲ್ಲಾಧಿಕಾರಿ ಮೊದಲ ಪ್ರತಿಕ್ರಿಯೆ ನೀಡಿದ್ದು, ರೈತರು ಹೆದರಬೇಕಿಲ್ಲ, ನೋಟಿಸ್ ಪಡೆದ ರೈತರು ಆತಂಕ ಪಡಬೇಕಿಲ್ಲ. ತಮ್ಮ ಬಳಿ ಜಮೀನು ಸಂಬಂಧಿಸಿದಂತೆ ದಾಖಲೆಗಳಿದ್ದರೆ ಆತಂಕ ಪಡಬೇಡಿ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದ್ದಾರೆ.
ನೋಟಿಸ್ ಬಂದ ಬಳಿಕ ಆಯಾ ತಾಲೂಕು ತಹಶಿಲ್ದಾರ್, ನಗರ ಸಭೆ ಇದ್ದಲ್ಲಿ ಮುಖ್ಯಾಧಿಕಾರಿಗಳಿಗೆ ಭೇಟಿಯಾಗಿ ತಮ್ಮ ಬಳಿ ಇರುವ ದಾಖಲಾತಿಗಳನ್ನ ಸಲ್ಲಿಕೆ ಮಾಡಿ. ದಾಖಲಾತಿಯ ಪರಿಶೀಲನೆ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸೂಕ್ತ ದಾಖಲಾತಿ ಇದ್ದಲ್ಲಿ ಇಂಧೀಕರಣ ಮಾಡೊಲ್ಲ ಎಂದ ಡಿಸಿ ಟಿ ಭೂಬಾಲನ್ ತಿಳಿಸಿದ್ದಾರೆ.
Post a comment
Log in to write reviews