ಮನೆ ಭಾಗ್ಯ ಮತ್ತು ಹಾಲು ಉತ್ಪಾದನೆ ಕುರಿತು ಸಗಣಿ ಬಳಿದು ಪ್ರತಿಭಟನೆಗಿಳಿದ ರೈತರು
ಬೆಂಗಳೂರು: ಗುಡಿಸಲು ನಿವಾಸಿಗಳಿಗೆ ಮನೆ ಭಾಗ್ಯ ಕಲ್ಪಿಸಬೇಕು, ಹಾಲು ಉತ್ಪಾದಕ ರೈತರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಪಾದಯಾತ್ರೆಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಚಾಲನೆ ನೀಡಿದರು. ಕನಕಪುರ ರಸ್ತೆಯಿಂದ ಪಾದಯಾತ್ರೆ ಆರಂಭಿಸಿ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ್ದರು.
ಕೆಲ ರೈತರು ಮೈಮೇಲೆ ಸಗಣಿ ಬಳಿದುಕೊಂಡು ಆಕ್ರೋಶ ಹೊರಹಾಕಿದರು. ಆದ್ರೆ ಮಾರ್ಗಮಧ್ಯೆ ಬ್ಯಾರಿಕೇಡ್ ಹಾಕಿ ಸೋಮನಹಳ್ಳಿ ಗೇಟ್ ಬಳಿಯೇ ರೈತರನ್ನು ತಡೆದರು. ಪ್ರತಿಭಟನಾ ಮಾರ್ಗವನ್ನು ಬಂದ್ ಮಾಡಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ, ನೂಕಾಟಗಳು ನಡೆಯಿತು. ಇದರಿಂದ ತೃಪ್ತರಾಗದ ರೈತರು ನಮ್ಮ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಂದ ಸಾಧ್ಯವಿಲ್ಲ, ಕೃಷಿ ಸಚಿವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
ರೈತರ ಬೇಡಿಕೆಗಳು:
1) ಬೆಂಗಳೂರು ದಕ್ಷಿಣ ತಾಲ್ಲೂಕಿನ 30 ಗ್ರಾಮಗಳಲ್ಲಿ ದಶಕಗಳಿಂದ ಉಳುಮೆ ಬಂದಿರುವ ಸಾಗುವಳಿ ಜಮೀನುಗಳನ್ನು ಪೋಡಿ, ದುರಸ್ತಿ ಮಾಡಿಕೊಟ್ಟು ರೈತರಿಗೆ ತಮ್ಮ ಜಮೀನುಗಳ ಮೇಲೆ ಸಂಪೂರ್ಣ ಹಕ್ಕನ್ನು ನೀಡಬೇಕು.
2) ಸೋಮನಹಳ್ಳಿ ಬಳಿ ನಿರ್ಮಿಸುತ್ತಿರುವ ಟೋಲ್‌ನಲ್ಲಿ ಸ್ಥಳೀಯ ವಾಹನ ಸವಾರರಿಗೆ ಸರ್ವಿಸ್ ರಸ್ತೆ ನೀಡಬೇಕು ಅಥವಾ ಟೋಲನ್ನು ಕಗ್ಗಲೀಪುರ ಬೈಪಾಸ್‌ಗೆ ಸ್ಥಳಾಂತರಿಸಬೇಕು.
3) ಕಗ್ಗಲಿಪುರ, ಸಾಲುಹುಣಸೆ ಉದಿಪಾಳ್ಯ ಬೈಪಾಸ್ ರಸ್ತೆ ನಿರ್ಮಿಸಿ ಸ್ಥಳೀಯರಿಗೆ ಉಂಟಾಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯನ್ನು ತಪ್ಪಿಸುವುದು.
4) ಅರಣ್ಯ ಇಲಾಖೆ ರೈತರನ್ನು ಒಕ್ಕಲೆಸಬೇಕೆಂದು ನೀಡುತ್ತಿರುವ ಕಿರುಕುಳದಿಂದ ಮುಕ್ತಿ ಕೊಡಿಸಬೇಕು.
5) 45 ವರ್ಷಗಳಿಂದ ಸಾಕಮ್ಮ ಬಡಾವಣೆಯಲ್ಲಿ ವಾಸಿಸುತ್ತಿರುವ ಗುಡಿಸಲು ನಿವಾಸಿಗಳಿಗೆ ಮನೆ ಭಾಗ್ಯ ಕಲ್ಪಿಸಬೇಕು.
6) ಪಟ್ಟರೆಡ್ಡಿ ಪಾಳ್ಯ ಗ್ರಾಮಕ್ಕೆ ಪರ್ಯಾಯ ರಸ್ತೆ ನಿರ್ಮಿಸಬೇಕು.
7) 7 ತಿಂಗಳಿನಿಂದ ತಡೆ ಹಿಡಿದಿರುವ ಹಾಲು ಉತ್ಪಾದಕ ರೈತರ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.
8) ಅಗತ್ಯವಿರುವ ಕಡೆಗಳಲ್ಲಿ ಸೇತುವೆ ರಸ್ತೆಗಳನ್ನು ನಿರ್ಮಿಸಿ ಕೊಡಬೇಕು.
9) ಹೆಚ್ಚಿನ ಮಳೆಯಾದಾಗ ನದಿಗಳಿಗೆ ಹರಿದು ಹೋಗುತ್ತಿರುವ ಅಪಾರ ಪ್ರಮಾಣದ ನೀರನ್ನು ಕೆರೆಗಳಿಗೆ ತುಂಬಿಸಿ ಅಂತರ್ಜಲ ಹೆಚ್ಚಿಸಬೇಕು. ಎಂದು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟರು.
Post a comment
Log in to write reviews