ಹಾಸನ: ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಸುರಿಯುತ್ತಿರುವ ಭಾರೀ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗುತ್ತಿವೆ. ಪದೇ ಪದೆ ಗುಡ್ಡ ಕುಸಿತದಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಮಲೆನಾಡು ಭಾಗದಲ್ಲಿ ಕಳೆದ 4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹೀಗಾಗಿ ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಭೂಕುಸಿತ ಭೀತಿ ಎದುರಾಗಿದ್ದು, ಈ ನಿಟ್ಟಿನಲ್ಲಿ ಮಣ್ಣು ಕುಸಿಯುತ್ತಿರುವ ಕಡೆ ಸೂಚನಾ ಫಲಕ ಅಳವಡಿಸುವ ಮೂಲಕ ತಾಲೂಕು ಆಡಳಿತ, ಹೆದ್ದಾರಿ ಪ್ರಾಧಿಕಾರದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಭೂಕುಸಿತ ಭೀತಿ ಹಿನ್ನಲೆ ಪ್ರತಿನಿತ್ಯ ಆತಂಕದಲ್ಲೇ ವಾಹನ ಸವಾರರು ಸಂಚಾರ ಮಾಡುವಂತಾಗಿದೆ. ಜುಲೈ ತಿಂಗಳಲ್ಲಿ ಧಾರಾಕಾರ ಮಳೆಯಿಂದ ದೊಡ್ಡತಪ್ಲು ಬಳಿ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ಈಗ ಮತ್ತೆ ಮಳೆಯಾಗುತ್ತಿರುವುದರಿಂದ ಭೂಕುಸಿತದ ಭೀತಿ ಎದುರಾಗಿದೆ.
ಬೆಂಗಳೂರು ಹಾಗೂ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗದಲ್ಲಿ ಮಾತ್ರ ಪದೇ ಪದೆ ಗುಡ್ಡ ಕುಸಿತವಾಗುತ್ತಿರುವುದರಿಂದ ರೈಲು ಸಂಚಾರಕ್ಕೆ ತಡೆಯಾಗುತ್ತಿದೆ. ಆಗಸ್ಟ್ 10ರಂದು ಸಕಲೇಶಪುರ ತಾಲ್ಲೂಕಿನ ಬಾಳ್ಳೂಪೇಟೆ ಸಮೀಪದ ದೊಡ್ಡನಾಗರಬಳಿ ಗುಡ್ಡ ಕುಸಿದು ನಾಲ್ಕು ದಿನ ರೈಲು ಸಂಚಾರಕ್ಕೆ ತಡೆಯಾಗಿತ್ತು. ಹಳಿ ಮೇಲೆ ಬಿದ್ದಿದ್ದ ಭಾರಿ ಪ್ರಮಾಣದ ಮಣ್ಣು ಹಾಗೂ ದೊಡ್ಡ ದೊಡ್ಡ ಬಂಡೆಕಲ್ಲುಗಳನ್ನ ತೆರವು ಮಾಡಿದ ಬಳಿಕ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.
ಆದರೆ ಅದೇ ದಿನದಂದು ಮಧ್ಯಾಹ್ನದ ವೇಳೆಗೆ ಮತ್ತೆ ಅದೇ ಸ್ಥಳದಲ್ಲಿ ಹಳಿ ಮೇಲೆ ಮಣ್ಣು ಕುಸಿದು ಮತ್ತೆ ರೈಲು ಸಂಚಾರಕ್ಕೆ ತಡೆಯಾಗಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಸಾವಿರಾರು ಜನರನ್ನು ಹೊತ್ತ ಬೆಂಗಳೂರು ಕಾರವಾರ ಎಕ್ಸಪ್ರೆಸ್ ಸಕಲೇಶಫುರ ತಾಲ್ಲೂಕಿನ ಬಾಳ್ಳುಪೇಟೆ ಸಮೀಪವೇ ಸಿಲುಕಿ ಪ್ರಯಾಣಿಕರು ಪರದಾಡಿದ್ದರು.
Post a comment
Log in to write reviews