ಹೈದರಾಬಾದ್: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ತೆಲಂಗಾಣ ಜನರ ನೆರವಿಗೆ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ 1 ಕೋಟಿ ರೂಪಾಯಿ ನೀಡಿದ್ದಾರೆ. ಇಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿದರು.
ತೆಲುಗು ರಾಜ್ಯಗಳಲ್ಲಿ ಪ್ರವಾಹ ಪರಿಹಾರ ಕಾರ್ಯಕ್ಕಾಗಿ ವೈಯಕ್ತಿಕವಾಗಿ 6 ಕೋಟಿ ರೂ. ನೀಡುತ್ತಿದ್ದೇನೆ. ಇದರಲ್ಲಿ ಆಂಧ್ರ, ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 1 ಕೋಟಿ ರೂಪಾಯಿ ಮತ್ತು ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿಗಳಿಗೆ 4 ಕೋಟಿ ರೂ. ನೀಡುವುದಾಗಿ ಈ ಹಿಂದೆ ಪವನ್ ಘೋಷಿಸಿದ್ದರು.
ರಾಜ್ಯದ ಖಮ್ಮಂ, ಮೆಹಬೂಬ್ ನಗರ, ಸೂರ್ಯಪೇಟ್ ಮತ್ತು ಇತರೆ ಜಿಲ್ಲೆಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 26 ಜನರು ಸಾವನ್ನಪ್ಪಿದ್ದು, ಅನೇಕರು ನಿರಾಶ್ರಿತರಾಗಿದ್ದರು. ಮನೆ, ಕೃಷಿ, ನೀರಾವರಿ ಟ್ಯಾಂಕ್ ಮತ್ತು ವಿದ್ಯುತ್ ಕಂಬಗಳು ಸೇರಿದಂತೆ ಅಪಾರ ಆಸ್ತಿ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, 5,438 ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಸರ್ಕಾರ ತಿಳಿಸಿದೆ.
ತೆಲಂಗಾಣದಲ್ಲಿ ಹಾನಿ ಪರಿಶೀಲನೆಗೆ ಇಂದು ಆರು ಸದಸ್ಯರ ಕೇಂದ್ರ ತಂಡ ಆಗಮಿಸಲಿದೆ. ಕರ್ನಲ್ ಕೀರ್ತಿ ಪ್ರತಾಪ್ ಸಿಂಗ್ ನೇತೃತ್ವದ ಈ ತಂಡ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ಅವರನ್ನು ಭೇಟಿಯಾಗಲಿದೆ.
ಪ್ರವಾಹದಿಂದಾಗ ಹಾನಿ ಕುರಿತು ಮನದಟ್ಟು ಮಾಡುವ ಉದ್ದೇಶದಿಂದ ತೆಲಂಗಾಣ ಸರ್ಕಾರ ಫೋಟೋ ಎಕ್ಸಿಬಿಷನ್ಗೆ ವ್ಯವಸ್ಥೆ ಮಾಡಿದ್ದು, ಇದನ್ನು ಕೇಂದ್ರ ತಂಡ ವೀಕ್ಷಿಸಲಿದೆ. ಬಳಿಕ ತಂಡ ಎರಡು ಗುಂಪಾಗಿ ವಿಂಗಡನೆಯಾಗಿ ಸೂರ್ಯಪೆಟ್, ಖಮ್ಮಂ, ಮೆಹಬೂಬ್ನಗರ್ ಮತ್ತು ಇತರೆ ಜಿಲ್ಲೆಗಳಿಗೆ ತೆರಳಿ ಹಾನಿಯ ಮೌಲ್ಯಮಾಪನ ಮಾಡಲಿದ್ದಾರೆ.
ಕೇಂದ್ರ ತಂಡದಲ್ಲಿ ಆರ್ಥಿಕ, ಕೃಷಿ, ರಸ್ತೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ತಲಾ ಒಬ್ಬರು ಅಧಿಕಾರಿಗಳಿದ್ದಾರೆ.
ಇತ್ತೀಚಿಗೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಕೂಡ ಮಳೆ ಹಾನಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತ ಕೃಷಿಕರ ಜೊತೆಗೆ ಮಾತುಕತೆ ನಡೆಸಿದ್ದರು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಪರಿಹಾರಕ್ಕಾಗಿ ತಕ್ಷಣಕ್ಕೆ 2,000 ಕೋಟಿ ರೂ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. (ಪಿಟಿಐ/ಐಎಎನ್ಎಸ್)
Post a comment
Log in to write reviews