ಪ್ರಜಾಸತ್ತಾತ್ಮಕ ತತ್ವಗಳನ್ನು ಅನುಸರಿಸಿ ಮಧ್ಯಂತರ ಸರ್ಕಾರ ರಚಿಸಿ: ಬಾಂಗ್ಲಾಗೆ ಅಮೆರಿಕ ಸಲಹೆ
ಅಮೆರಿಕ: ಬಾಂಗ್ಲಾದೇಶದಲ್ಲಿ ನಿವೃತ್ತ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಂದ ಪ್ರಧಾನಿ ಶೇಖ್ ಹಸೀನಾ ಹಠಾತ್ ರಾಜೀನಾಮೆ ನೀಡಿದ್ದು, ದೇಶದ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ಪ್ರಜಾಪ್ರಭುತ್ವ ತತ್ವಗಳು, ಕಾನೂನು ನಿಯಮ ಹಾಗೂ ಬಾಂಗ್ಲಾದೇಶದ ಜನರ ಇಚ್ಛೆಗೆ ಅನುಗುಣವಾಗಿ ರಚಿಸಬೇಕು ಎಂದು ಜೋ ಬೈಡನ್ ಆಡಳಿತ ಹೇಳಿದೆ.
ಬಾಂಗ್ಲಾ ಜನತೆ ದೇಶದ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವುದನ್ನು ನಾವು ನೋಡಲು ಬಯಸುತ್ತೇವೆ. ಅಮೆರಿಕ ಸರ್ಕಾರವು ಬಾಂಗ್ಲಾದೇಶದ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ಹಾಗೇ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡುತ್ತೇವೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಿಲ್ಲರ್ರ ಮಾತು ಮುಂದುವರೆದು, ಈಗ ತೆಗೆದುಕೊಳ್ಳುತ್ತಿರುವ ಮಧ್ಯಂತರ ಸರ್ಕಾರದ ಬಗ್ಗೆ ಎಲ್ಲ ನಿರ್ಧಾರಗಳನ್ನು ಪ್ರಜಾಪ್ರಭುತ್ವದ ತತ್ವಗಳು ಮತ್ತು ಕಾನೂನಿನ ನಿಯಮ ಮತ್ತು ಬಾಂಗ್ಲಾದೇಶದ ಜನರ ಇಚ್ಛೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ದೇಶದಲ್ಲಿ ನಡೆದಿರುವ ಹಿಂಸಾಚಾರ, ಕಾನೂನನ್ನು ಉಲ್ಲಂಘಿಸುವ ಕೃತ್ಯಗಳಿಗೆ ಹೊಣೆಗಾರರಾಗಿರುವ ಯಾರಾದರೂ ಕೂಡ ಅವರೇ ಜವಾಬ್ದಾರರಾಗಿರುತ್ತಾರೆ ಎಂದರು.
ಪ್ರಧಾನಿ ಶೇಖ್ ಹಸೀನಾ ಅಮೆರಿಕದಲ್ಲಿ ಆಶ್ರಯ?: ಸುದ್ದಿಗೋಷ್ಠಿಯಲ್ಲಿ ಮ್ಯಾಥ್ಯೂ ಮಿಲ್ಲರ್ ಅವರಿಗೆ ಮಾಧ್ಯಮದವರು ಮಾಜಿ ಪ್ರಧಾನಿ ಹಸೀನಾ ಅವರು ಅಮೆರಿಕಾದಲ್ಲಿ ಆಶ್ರಯ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದಾಗ, 'ನನಗೆ ತಿಳಿದಿಲ್ಲ' ಎಂದು ಉತ್ತರಿಸಿದ್ದಾರೆ. ಹಾಗೇ, "ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರ ಮತ್ತು ಅನೇಕ ಸಾವು - ನೋವುಗಳಿಗೆ ಸಂಬಂಧಿಸಿದಂತೆ ಪೂರ್ಣ ಮತ್ತು ಪಾರದರ್ಶಕ ತನಿಖೆಗಳನ್ನು ಹೊಂದಿರುವುದು ಅತ್ಯಗತ್ಯ. ಮಧ್ಯಂತರ ಸರ್ಕಾರಕ್ಕೆ ಸಂಬಂಧಿಸಿದಂತೆ ನಾವು ಕೂಡ ಗಮನಹರಿಸುವುದು ಮುಖ್ಯವಾಗಿದೆ ಎಂದು ನಾವು ಭಾವಿಸುತ್ತೇವೆ " ಎಂದು ಮಿಲ್ಲರ್ ಹೇಳಿದ್ದಾರೆ.
"ಅಲ್ಲದೇ ಬಾಂಗ್ಲಾದೇಶದ ಜನರೊಂದಿಗೆ ಅಮೆರಿಕ ತನ್ನ ಸಂಬಂಧವನ್ನು ಬಹಳವಾಗಿ ಗೌರವಿಸುತ್ತದೆ. ಅದೇ ಸಂಬಂಧವನ್ನು ನಾವು ಮುಂದುವರೆಸುವುದನ್ನು ನೋಡಲು ಬಯಸುತ್ತೇವೆ, ಪ್ರತಿಯೊಬ್ಬರನ್ನು ವಿನಂತಿಸುತ್ತೇನೆ. ಸದ್ಯ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಅಮೆರಿಕ ಆಡಳಿತ ಅತ್ಯಂತ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ನಮ್ಮ ಸರ್ಕಾರ ಬಾಂಗ್ಲಾದೇಶದ ಜನರೊಂದಿಗೆ ನಿಂತಿದೆ. ಈ ಹಿಂಸಾಚಾರದಿಂದ ದೂರವಿರಲು ನಾವು ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತೇವೆ. ಕಳೆದ ವಾರಗಳಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಇನ್ನಾದರೂ ಮುಂದಿನ ದಿನಗಳಲ್ಲಿ ನಾವು ಶಾಂತ ಮತ್ತು ಸಂಯಮಕ್ಕಾಗಿ ಕೋರುತ್ತಿದ್ದೇವೆ"ಎಂದು ಅವರು ಹೇಳಿದರು.
"ನಾವು ಮಧ್ಯಂತರ ಸರ್ಕಾರದ ಘೋಷಣೆಯನ್ನು ಸ್ವಾಗತಿಸುತ್ತೇವೆ ಮತ್ತು ಬಾಂಗ್ಲಾದೇಶದ ಕಾನೂನುಗಳಿಗೆ ಅನುಗುಣವಾಗಿ ಯಾವುದೇ ಪರಿವರ್ತನೆಯನ್ನು ನಡೆಸಬೇಕೆಂದು ಒತ್ತಾಯಿಸುತ್ತೇವೆ. ಅಂತಿಮವಾಗಿ, ವಾರಾಂತ್ಯದಲ್ಲಿ ಮತ್ತು ಕಳೆದ ವಾರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ಸಾವುನೋವುಗಳು ಮತ್ತು ಗಾಯಗಳ ವರದಿಗಳ ಬಗ್ಗೆ ನಾವು ತೀವ್ರ ದುಃಖಿತರಾಗಿದ್ದೇವೆ. ನಾವು ನಮ್ಮ ಆಳವಾದ ಸಂತಾಪವನ್ನು ಸೂಚಿಸುತ್ತದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಬಳಲುತ್ತಿರುವವರೊಂದಿಗೆ ಇದೆ‘‘ ಎಂದು ಮಿಲ್ಲರ್ ಹೇಳಿದರು.
ಇದಕ್ಕೂ ಮೊದಲು, ವೈಟ್ಹೌಸ್ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು, "ನಾವು ಬಾಂಗ್ಲಾದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ". ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗೌರವಿಸಲು ಯುನೈಟೆಡ್ ಸ್ಟೇಟ್ಸ್ ದೀರ್ಘಕಾಲ ಕರೆ ನೀಡಿದೆ. ಹಾಗೂ ಮಧ್ಯಂತರ ಸರ್ಕಾರ ರಚನೆಯು ಪ್ರಜಾಸತ್ತಾತ್ಮಕ ಮತ್ತು ಎಲ್ಲರನ್ನೂ ಒಳಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದಿದ್ದಾರೆ.
ಇನ್ನು ಬಾಂಗ್ಲಾದೇಶದಲ್ಲಿ ಪ್ರಧಾನಿ ಹಸೀನಾ ಅವರ ರಾಜೀನಾಮೆ ಜತೆಗೆ ದೇಶದಿಂದಲೇ ನಿರ್ಗಮನದ ಸುದ್ದಿ ಹರಡುತ್ತಿದ್ದಂತೆ, ನೂರಾರು ಜನರು ಅವರ ನಿವಾಸಕ್ಕೆ ನುಗ್ಗಿ ಒಳಾಂಗಣವನ್ನು ಧ್ವಂಸಗೊಳಿಸಿದರು. ಈ ಹೋರಾಟ ಒಟ್ಟು ಹದಿನೈದು ದಿನಗಳಲ್ಲಿ 300 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.
ಬಾಂಗ್ಲಾದ ಪರಿಸ್ಥಿತಿಯನ್ನು ಬಹಳ ಹತ್ತಿರದಿಂದ ಕಾಳಜಿವಹಿಸುತ್ತಿದ್ದೇವೆ - ವಿಶ್ವಸಂಸ್ಥೆ: ಬಾಂಗ್ಲಾದೇಶದ ಹಿಂಸಾತ್ಮಕ ಪರಿಸ್ಥಿತಿಗೆ ವಿಶ್ವಸಂಸ್ಥೆಯು ಪ್ರತಿಕ್ರಿಯಿಸಿದ್ದು ಅತ್ಯಂತ ನಿಕಟವಾಗಿ ಗಮನಹರಿಸುತ್ತಿದ್ದು ಕಾಳಜಿ ವಹಿಸುತ್ತಿದ್ದೇವೆ. ರಾಷ್ಟ್ರದಲ್ಲಿ ಜನತೆಗೆ ಶಾಂತಿ ಮತ್ತು ಸಂಯಮಕ್ಕೆ ಯುಎನ್ ಕರೆ ನೀಡಿದೆ ಎಂದು ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ವಕ್ತಾರರು ಸೋಮವಾರ ಹೇಳಿದ್ದಾರೆ. ಜತೆಗೆ ವಿಶ್ವಸಂಸ್ಥೆ ಢಾಕಾ ಮತ್ತು ಬಾಂಗ್ಲಾದೇಶದ ಇತರ ನಗರಗಳ ಬೀದಿಗಳಲ್ಲಿ ಇರುವವರನ್ನು ರಕ್ಷಿಸಲು ಭದ್ರತಾ ಪಡೆಗಳನ್ನು ಒತ್ತಾಯಿಸುತ್ತಿದೆ.
Post a comment
Log in to write reviews