ರಾಂಚಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ಗೆ ಸ್ಥಳೀಯ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಹೇಮಂತ್ ಸೊರೇನ್‌ಗೆ ರನ್ನು ಬಂಧಿಸಿತ್ತು. ಸೊರೇನ್ ಅವರ ಜಾಮೀನು ಅರ್ಜಿಯ ಆದೇಶವನ್ನು ಹೈಕೋರ್ಟ್ ಜೂನ್ 13ರಂದು ಕಾಯ್ದಿರಿಸಿತ್ತು. ಈಗ ತೀರ್ಪು ಪ್ರಕಟಿಸಿದೆ. ವಿಪಕ್ಷಗಳು ಜಾಮೀನು ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿವೆ. ಜಾರ್ಖಂಡ್‌ನಲ್ಲಿ ಸೊರೇನ್ ಬೆಂಬಲಿಗರು ಸಂಭ್ರಮಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಸೋರೆನ್ ಅವರ ಹಿರಿಯ ವಕೀಲ ಅರುಣಾಭ್ ಚೌಧರಿ, ‘ನ್ಯಾಯಾಲಯವು ಮೇಲ್ನೋಟಕ್ಕೆ ಸೊರೇನ್ ಅವರು ಅಪರಾಧದಲ್ಲಿ ತಪ್ಪಿತಸ್ಥರಲ್ಲ ಎಂದು ಮನಗಂಡಿದೆ ಮತ್ತು ಜಾಮೀನಿನ ಮೇಲೆ ಬಿಡುಗಡೆ ಆದಾಗ ಅವರು ಅಪರಾಧ ಮಾಡುವ ಸಾಧ್ಯತೆಯಿಲ್ಲ ಎಂದು ಅಭಿಪ್ರಾಯಪಟ್ಟಿದೆ’ ಎಂದಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಸೊರೇನ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇ.ಡಿ. ಜ.31ರಂದು ಬಂಧಿಸಿತ್ತು. ಹೀಗಾಗಿ ಅಂದೇ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
‘ಸೊರೇನ್ ಅವರು ರಾಜ್ಯದ ರಾಜಧಾನಿ ರಾಂಚಿಯ ಬಾರ್ಗೇನ್ ಆಂಚಲ್‌ನಲ್ಲಿ ಕಾನೂನುಬಾಹಿರವಾಗಿ 8.86 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಖ್ಯಮಂತ್ರಿಯಾಗಿ ತಮ್ಮ ಸ್ಥಾನ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಇ.ಡಿ. ಆರೋಪಿಸಿತ್ತು. ಆದರೆ ಇದು ಸುಳ್ಳು ಆರೋಪ ಎಂದು ಸೊರೇನ್ ಪರ ವಕೀಲರಾದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದಿಸಿದ್ದರು.
Post a comment
Log in to write reviews