ಬೆಂಗಳೂರು: ಶನಿವಾರ ಗಾನ ಗಂಧರ್ವ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯ ಅವರ ಪುತ್ಥಳಿ ಅನಾವರಣ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು.
ಗಾನ ಗಂಧರ್ವ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಇಂದು ನಮ್ಮೊಂದಿಗೆ ಇಲ್ಲವಾದರೂ, ಅವರ ಹಾಡುಗಳ ಮೂಲಕ ಎಂದಿಗೂ ಜೀವಂತ. ದೇಶ ಕಂಡ ಅದ್ಭುತ ಗಾಯಕನ ಮೇಲೆ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರಿಗೂ ಅತೀವ ಪ್ರೀತಿ. ಆ ಪ್ರೀತಿಗಾಗಿ ಮಧುಸೂದನ್ ಹವಾಲ್ದಾರ್ ಎಸ್ ಪಿ ಬಿ ಅವರ ಸುಂದರ ಪುತ್ಥಳಿ ಮಾಡಿಸಿದ್ದಾರೆ. ಇತ್ತೀಚಿಗೆ ಈ ಪ್ರತಿಮೆಯ ಅನಾವರಣ ಸಮಾರಂಭ ನಡೆಯಿತು.
ಡಾ. ವೆಂಕಟರಮಣ ಎಸ್.ಪಿ.ಬಿ ಅವರ ಪುತ್ಥಳಿ ಅನಾವರಣ ಮಾಡಿದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಲಹರಿ ವೇಲು, ಎಸ್.ಪಿ.ಬಿ ಆಪ್ತರಾದ ಗೋಪಿ, ಬಿ.ವಿ.ಶ್ರೀನಿವಾಸ್, ಸೌಂಡ್ ಆಫ್ ಮ್ಯೂಸಿಕ್ ನ ಗುರುರಾಜ್, ಪಿ.ಆರ್ ಓ ಸುಧೀಂದ್ರ ವೆಂಕಟೇಶ್, ಗಾಯಕ ವಿಷ್ಣು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಮಧುಸೂದನ್ ಹವಾಲ್ದಾರ್ ಮಾತನಾಡಿದರು.
ನನಗೆ ಎಸ್.ಪಿ.ಬಿ ಅವರ ಮೇಲೆ ಅಪಾರ ಪ್ರೀತಿ. ಕೆಲವು ದಿನಗಳ ಹಿಂದೆ ಹೈದರಾಬಾದ್ ಗೆ ಹೋಗಿದ್ದಾಗ ಸ್ನೇಹಿತರೊಬ್ಬರು ಎಸ್.ಪಿ.ಬಿ ಅವರ ಬಗ್ಗೆ ಹೇಳಿದ ಅನೇಕ ವಿಷಯಗಳು ನನಗೆ ಈ ಪುತ್ಥಳಿ ನಿರ್ಮಿಸಲು ಪ್ರೇರಣೆಯಾಯಿತು. ಇಂದು ಎಸ್.ಪಿ.ಬಿ ಅವರನ್ನು ಹತ್ತಿರದಿಂದ ಬಲ್ಲವರು ಈ ಪುತ್ಥಳಿ ಅನಾವರಣ ಮಾಡಿದ್ದು ಖುಷಿಯಾಗಿದೆ. ಅವರಿಗೆಲ್ಲಾ ಧನ್ಯವಾದ. ಈ ಪುತ್ಥಳಿಯನ್ನು ತಮ್ಮಲ್ಲೇ ಸ್ಥಾಪಿಸಬೇಕೆಂದು ಅನೇಕರು ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಬಳಿ ಚರ್ಚಿಸಿ ಸೂಕ್ತ ಸ್ಥಳದಲ್ಲಿ ಪುತ್ಥಳಿ ಪ್ರತಿಷ್ಠಾಪಿಸುವುದಾಗಿ ನಿರ್ದೇಶಕ ಮಧುಸೂದನ್ ಹವಾಲ್ದಾರ್ ತಿಳಿಸಿದರು. ಆಗಮಿಸಿದ್ದ ಗಣ್ಯರು ಎಸ್.ಪಿ.ಬಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು.
Post a comment
Log in to write reviews