ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಎಂದರೆ ಕನ್ನಡಿಗ ಕೆಎಲ್ ರಾಹುಲ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಆದರೆ ಕಳೆದ ಕೆಲವು ದಿನಗಳಿಂದ ರಾಹುಲ್ ಅವರ ಬ್ಯಾಟ್ ಮೌನಕ್ಕೆ ಶರಣಾಗಿದ್ದು, ಅಲ್ಲದೆ ಅವಶ್ಯಕ ಸಮಯದಲ್ಲಿ ರಾಹುಲ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವುತ್ತಿದ್ದಾರೆ. ಇದೀಗ ನ್ಯೂಜಿಲೆಂಡ್ ವಿರುದ್ಧವೂ ಲಯ ಕಂಡುಕೊಳ್ಳುವಲ್ಲಿ ಎಡವುತ್ತಿದ್ದಾರೆ. ಕಳೆದ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಇದೇ ಸಮಸ್ಯೆಗೆ ರಾಹುಲ್ ಸಿಲುಕಿದ್ದರು.
ಹೀಗಾಗಿ ತಂಡದಿಂದ ರಾಹುಲ್ರನ್ನು ಕೈಬಿಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಅಲ್ಲದೆ ರಾಹುಲ್ಗೆ ಅವಕಾಶ ನೀಡುವ ಸಲುವಾಗಿ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸರ್ಫರಾಜ್ ಖಾನ್ ಅವರನ್ನು ಪುಣೆ ಟೆಸ್ಟ್ನ ಪ್ಲೇಯಿಂಗ್ ಹನ್ನೊಂದರಿಂದ ಕೈಬಿಡಬಹುದು ಎಂಬ ವರದಿಗಳಿವೆ. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ರಾಹುಲ್ಗೆ ಅವಕಾಶ ನೀಡುತ್ತಿರುವ ಬಗ್ಗೆ ವ್ಯಂಗ್ಯ ಮಾಡಲಾಗುತ್ತಿದೆ. ಇದೀಗ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕಾನ್ಪುರ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಬಾಂಗ್ಲಾದೇಶ ವಿರುದ್ಧದ ಕಠಿಣ ಪಿಚ್ನಲ್ಲಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿ 68 ರನ್ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ರಾಹುಲ್ ದೊಡ್ಡ ಸ್ಕೋರ್ ಮಾಡುವ ಸಾಮರ್ಥ್ಯವಿದೆ. ಅಲ್ಲದೆ ನಾನೊಂದು ಬಿಗ್ ಇನ್ನಿಂಗ್ಸ್ ಆಡಬೇಕು ಎಂಬುದು ಸಹ ರಾಹುಲ್ ಅವರಿಗೆ ತಿಳಿದಿದೆ. ಹೀಗಾಗಿ ರಾಹುಲ್ಗೆ ತಂಡದ ಬೆಂಬಲವಿದೆ ಎಂದು ಗಂಭೀರ್ ಹೇಳಿದ್ದಾರೆ.
ಗಂಭೀರ್ ಈ ರೀತಿಯಾಗಿ ಹೇಳಿದ್ದನ್ನು ಗಮನಿಸಿದರೆ, ರಾಹುಲ್ಗೆ ಪುಣೆ ಟೆಸ್ಟ್ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಸಮಸ್ಯೆಯೆಂದರೆ ಉತ್ತಮ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್ ಕೂಡ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಗಿಲ್ ಅವರಿಗೆ ಅವಕಾಶ ನೀಡಬೇಕೆಂದರೆ ತಂಡದಿಂದ ಒಬ್ಬರನ್ನು ಕೈಬಿಡಬೇಕಾಗಿದೆ. ಆದ್ದರಿಂದ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
Post a comment
Log in to write reviews