ಬೆಂಗಳೂರು: RCB 2021 ರಲ್ಲಿ ಆರ್ಸಿಬಿಗೆ ಎಂಟ್ರಿ ಕೊಟ್ಟಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಮೊದಲ ಸೀಸನ್ನಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದರು. ಆ ಸೀಸನ್‌ನಲ್ಲಿ 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಅವರು 6 ಅರ್ಧಶತಕಗಳೊಂದಿಗೆ 513 ರನ್ ಕಲೆಹಾಕಿದ್ದರು. ಆದರೆ ಕಳೆದ ಸೀಸನ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 10 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 52 ರನ್‌ಗಳು ಎಂದರೆ ನಂಬಲೇಬೇಕು.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ಗ್ಲೆನ್ ಮ್ಯಾಕ್ಸ್ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದನ್ನು ಪುಷ್ಠೀಕರಿಸುವಂತೆ ಇದೀಗ ಮ್ಯಾಕ್ಸ್ವೆಲ್ ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ತಂಡವನ್ನು ಅನ್ಫಾಲೋ ಮಾಡಿದ್ದಾರೆ.
ಕಳೆದ ಮೂರು ಸೀಸನ್ಗಳಿಂದ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ ಫ್ರಾಂಚೈಸಿಗಳ ಮೀಟಿಂಗ್ಗೂ ಮುನ್ನ ಆರ್ಸಿಬಿ ಇನ್ಸ್ಟಾಗ್ರಾಮ್ ಖಾತೆಯನ್ನು ಅನ್ಫಾಲೋ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಇದೇ ಕಾರಣದಿಂದಾಗಿ ಆರ್ಸಿಬಿ ಮ್ಯಾಕ್ಸ್ವೆಲ್ ಅವರನ್ನು ಕೈ ಬಿಡುವುದು ಕನ್ಫರ್ಮ್ ಎನ್ನಲಾಗುತ್ತಿದೆ.
2021 ರ ಹರಾಜಿನಲ್ಲಿ ಆರ್ಸಿಬಿ ಫ್ರಾಂಚೈಸಿಯು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು 14.25 ಕೋಟಿ ರೂ.ಗೆ ಖರೀದಿಸಿತ್ತು. ಇದಾದ ಬಳಿಕ 2022ರ ಮೆಗಾ ಹರಾಜಿಗೂ ಮುನ್ನ ಅವರನ್ನು 11 ಕೋಟಿ ರೂ. ನೀಡಿ ಉಳಿಸಿಕೊಂಡಿತ್ತು. ಆದರೆ ಈ ಬಾರಿ ಆಸ್ಟ್ರೇಲಿಯಾ ಆಲ್ರೌಂಡರ್ನನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆಯಿಲ್ಲ.
ಏಕೆಂದರೆ ಕಳೆದ ಸೀಸನ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಅವರ ಕೊಡುಗೆ ಕೇವಲ 52 ರನ್ಗಳು. ಅಂದರೆ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಮ್ಯಾಕ್ಸಿ 5.78 ಸರಾಸರಿಯಂತೆ ಕೇವಲ 52 ರನ್ ಮಾತ್ರ ಕಲೆಹಾಕಿದ್ದರು. ಅದರಲ್ಲೂ ಒಂದೇ ಸೀಸನ್ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಹೀಗಾಗಿಯೇ ಆರ್ಸಿಬಿ ಮ್ಯಾಕ್ಸ್ವೆಲ್ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಿದೆ.
RCB ಪರ 52 ಪಂದ್ಯಗಳನ್ನಾಡಿರುವ ಗ್ಲೆನ್ ಮ್ಯಾಕ್ಸ್ವೆಲ್ 1266 ರನ್ ಕಲೆಹಾಕಿದ್ದಾರೆ. ಈ ವೇಳೆ 12 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಬೌಲಿಂಗ್ನಲ್ಲಿ 398 ಎಸೆತಗಳನ್ನು ಎಸೆದಿರುವ ಮ್ಯಾಕ್ಸಿ ಒಟ್ಟು 18 ವಿಕೆಟ್ಗಳನ್ನು ಕಬಳಿಸಲಷ್ಟೇ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಮ್ಯಾಕ್ಸ್ವೆಲ್ ಅವರನ್ನು ಬಿಡುಗಡೆ ಮಾಡಿ, ಬದಲಿ ಆಲ್ರೌಂಡರ್ನ ಖರೀದಿಗೆ ಆರ್ಸಿಬಿ ಫ್ರಾಂಚೈಸಿ ಮುಂದಾಗಬಹುದು.
Post a comment
Log in to write reviews