ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಉಚಿತ ಶೂ ಮತ್ತು ಸಾಕ್ಸ್ ಯೋಜನೆಗೆ ಏಳು ವರ್ಷಗಳ ಹಿಂದಿನ ದರವನ್ನೇ ಈ ಬಾರಿಯೂ ಸರ್ಕಾರ ಮುಂದುವರೆಸಿ ಆದೇಶ ಹೊರಡಿಸಿದೆ.
ಏಳು ವರ್ಷಗಳ ಹಿಂದಿನ ದರವನ್ನೇ ಮುಂದುವರೆಸಿರುವುದರಿಂದ ಸರ್ಕಾರದ ಷರತ್ತಿನಂತೆ ರಾಷ್ಟ್ರಮಟ್ಟದ ಕಂಪನಿಗಳಿಂದ ಗುಣಮಟ್ಟದ ಶೂ, ಸಾಕ್ಸ್ ಖರೀದಿಸಲು ಜವಾಬ್ದಾರಿ ಹೊತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್‌ಡಿಎಂಸಿ) ದಾನಿಗಳ ಬಳಿ ಕೈಯೊಡ್ಡುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿವೆ.
ಸರ್ಕಾರ ನಿಗದಿಪಡಿಸಿರುವ ಹಳೆಯ ದರದಲ್ಲಿ ಇಲಾಖೆ ಸೂಚಿಸಿರುವಂತೆ ಉತ್ತಮ ಗುಣಮಟ್ಟದ ಶೂ, ಸಾಕ್ಸ್ ಖರೀದಿಸಲು ಸಾಧ್ಯವಿಲ್ಲ. ಜೊತೆಗೆ ಖರೀದಿಸಲು ವಿಧಿಸಿರುವ ಷರತ್ತು ಪಾಲಿಸುವುದು ಕಷ್ಟ. ಮುಕ್ತ ಮಾರುಕಟ್ಟೆಯಲ್ಲೇ ಒಂದು ಜೊತೆ ಗುಣಮಟ್ಟದ ಶೂ ಬೆಲೆ 450-500 ರೂ. ಇದೆ. ಜೊತೆಗೆ ಇಂಧನ ಬೆಲೆ ಏರಿಕೆಯಿಂದ ಸರಕು ಸಾಗಣೆ ದರ ಪ್ರತಿ ವರ್ಷ ಏರುತ್ತಿರುತ್ತದೆ.
ಹೀಗಿರುವಾಗ ಸರ್ಕಾರ ದರ ಪರಿಷ್ಕರಿಸದೇ ಈ ಹಿಂದೆ ಇದ್ದಂತೆ 1ರಿಂದ 5ನೇ ತರಗತಿ ಮಕ್ಕಳಿಗೆ ಒಂದು ಜೊತೆ ಶೂ 2 ಜೊತೆ ಸಾಕ್ಸ್ ಖರೀದಿಗೆ 265ರೂ. 6-8 ತರಗತಿಗೆ ತಲಾ 295 ರೂ. 9-10 ತರಗತಿಗೆ ತಲಾ 325 ರೂ. ನಿಗದಿ ಮಾಡಿದೆ. ಈ ಬೆಳವಣಿಗೆ ಶಾಲಾ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.
ಕಡಿಮೆ ಮಕ್ಕಳಿರುವ ಶಾಲೆಗೆ ಹೇಗಾದರೂ ನೀಡಬಹುದು. ಹೆಚ್ಚುಮಕ್ಕಳಿರುವ ಶಾಲೆಗಳಿಗೆ ದೊಡ್ಡಮೊತ್ತದ ದೇಣಿಗೆ ಬೇಕಾಗುತ್ತದೆ. ಸರ್ಕಾರ ಶಾಲೆ ಆರಂಭವಾದ ಬಳಿಕ ಹಣ ಬಿಡುಗಡೆ ಮಾಡಿದೆ. ಈಗ ಪ್ರಕ್ರಿಯೆ ಶುರು ಮಾಡಿದರೂ ಖರೀದಿ ಮಾಡಲು ತಿಂಗಳುಗಳೇ ಬೇಕಾಗುತ್ತದೆ. ದಾನಿಗಳಿಗಾಗಿ ಕಾಯುತ್ತಾ ಕೂತರೆ ಶೂ, ಸಾಕ್ಸ್ ಖರೀದಿ ಇನ್ನಷ್ಟು ತಡವಾಗುತ್ತದೆ ಎಂದು ರಾಜ್ಯ ಸರ್ಕಾರಿ ಶಾಲೆಗಳಲ್ಲಿನ ಎಸ್‌ಡಿಎಂಸಿ ಪ್ರತಿನಿಧಿಗಳು, ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Post a comment
Log in to write reviews