ಚಂಡೀಗಢ: ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚುನಾವಣಾ ಕಣದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 9.53ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.
ಚುನಾವಣಾ ಆಯೋಗವು ಮುಕ್ತ, ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ಒಟ್ಟು 1,031 ಅಭ್ಯರ್ಥಿಗಳು ವಿಧಾನಸಭಾ ಚುನಾವಣಾ ಅಖಾಡದಲ್ಲಿದ್ದು, 20 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ 2 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಈ ಬಾರಿಯ ವಿಧಾನಸಭೆ ಚುನಾವಣೆಯು ಕುತೂಹಲಕಾರಿಯಾಗಲು ಹಲವು ಕಾರಣಗಳಿವೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮತ್ತೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ಪುನಃ ತನ್ನ ತೆಕ್ಕೆಗೆ ಪಡೆಯುವ ನಿರೀಕ್ಷೆಯಲ್ಲಿದೆ.
ಮೊದಲ ವೋಟ್ ಮಾಡಿದ ಮನು ಭಾಕರ್: ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರು ತಮ್ಮ ಮೊದಲ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, “ಈ ದೇಶದ ಯುವ ಜನತೆಯಾಗಿ ಅತ್ಯುತ್ತಮ ಅಭ್ಯರ್ಥಿಗೆ ಮತ ಚಲಾಯಿಸುವುದು ನಮ್ಮ ಜವಾಬ್ದಾರಿಯಾಗಿದೆ. ಸಣ್ಣ ಹೆಜ್ಜೆಗಳೂ ಮುಂದೆ ದೊಡ್ಡ ಗುರಿಗಳಿಗೆ ಮುಖ್ಯವಾಗಿವೆ. ಮೊದಲ ಬಾರಿಗೆ ಮತ ಹಾಕಿದ್ದೇನೆ” ಎಂದು ಹೇಳಿದರು.
Post a comment
Log in to write reviews