ನವದೆಹಲಿ: ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸಬಾರದು. ದೇವರಲ್ಲಿ ನಂಬಿಕೆ ಇದ್ದರೆ ಅದನ್ನು ನಿಮ್ಮ ಮನೆಯಲ್ಲಿ ಮಾಡಿಕೊಳ್ಳಿ ಎಂದು ಪ್ರಧಾನ ಮಂತ್ರಿ ಅವರ ವಿರುದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡುತ್ತಿರುವುದಕ್ಕೆ ಖರ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜಕೀಯ ಮತ್ತು ಧರ್ಮವನ್ನು ಎಂದಿಗೂ ಒಟ್ಟಿಗೆ ಸೇರಿಸಬಾರದು. ಇವೆರಡನ್ನೂ ಪ್ರತ್ಯೇಕವಾಗಿ ಇಡಬೇಕು. ಚುನಾವಣೆಯೊಂದಿಗೆ ಧಾರ್ಮಿಕ ಭಾವನೆಗಳನ್ನು ಜೋಡಿಸುವುದು ತಪ್ಪು ಎಂದಿದ್ದಾರೆ.
ಪ್ರಧಾನಿ ಅವರು ಕನ್ಯಾಕುಮಾರಿಗೆ ಹೋಗಿ ನಾಟಕ ಪ್ರದರ್ಶಿಸಿ ಅದೆಷ್ಟು ಪೋಲೀಸ್ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ ಎಂದು ಪ್ರಶ್ನಿಸಿರುವ ಅವರು, ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡು ಇಷ್ಟೊಂದು ಹಣ ಏಕೆ ಪೋಲು ಮಾಡುತ್ತೀರಿ ? ಅಲ್ಲಿಗೆ ಹೋಗಿ ನೀವು ಮಾಡುತ್ತಿರುವ ಶೋ-ಆಫ್ ನಿಂದ ದೇಶಕ್ಕೆ ಹಾನಿ ಉಂಟು ಮಾಡಲಿದೆ. ನಿಮಗೆ ದೇವರಲ್ಲಿ ನಂಬಿಕೆ ಇದ್ದರೆ ನಿಮ್ಮ ಮನೆಯಲ್ಲಿ ಮಾಡಿ ಎಂದಿದ್ದಾರೆ. ಪ್ರಧಾನಿ ಮೋದಿ ಏನೇ ಹೇಳಲಿ, ದೇಶದ ಜನ ಪ್ರಧಾನಿ ಮೋದಿಯವರ ನಾಯಕತ್ವ ತಿರಸ್ಕರಿಸಲು ನಿರ್ಧರಿಸಿದ್ದಾರೆ. ಅವರ ಆಡಳಿತದಲ್ಲಾದ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಈ ಚುನಾವಣೆಯಲ್ಲಿ ಅವರ ವಿರುದ್ದ ಕೆಲಸ ಮಾಡಿದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ವಿಷಯವು ಜನರ ಮನಸ್ಸಿನಲ್ಲಿ ಇದೆ ಎಂದಿದ್ದಾರೆ.
Post a comment
Log in to write reviews