ಡಿಕೆ ಶಿವಕುಮಾರ್ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧಿತ ಅರ್ಜಿಯ ತೀರ್ಪನ್ನು ಹೈಕೋಟ್ ಕಾಯ್ದಿರಿಸಿದೆ.
ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಹಾಗೂ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಲ್ಲಿಸಿದ್ದ ಎರಡು ಪ್ರತ್ಯೇಕ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಕೆ. ಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ.
ಡಿ.ಕೆ. ಶಿವಕುಮಾರ್ ಮತ್ತು ಸರ್ಕಾರದ ಪರ ವಕೀಲರ ವಾದಕ್ಕೆ ಪ್ರತ್ಯುತ್ತರ ನೀಡಿದ ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನ ಕುಮಾರ್, ಒಮ್ಮೆ ಸಿಬಿಐ ತನಿಖೆಗೆ ನೀಡಿದ ಅನುಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕಿಲ್ಲ. ಈಗಾಗಲೇ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ತನಿಖೆ ಪ್ರಗತಿಯಲ್ಲಿರುವಾಗ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯುವುದು ಕಾನೂನುಬಾಹಿರ. ಹಾಗಾಗಿ, ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಈ ಹಿಂದಿನ ವಿಚಾರಣೆ ವೇಳೆ ರಾಜ್ಯ ಸರ್ಕಾರ ಮತ್ತು ಡಿ. ಕೆ. ಶಿವಕುಮಾರ್ ಪರ ವಕೀಲರು, ಈ ಹಿಂದಿನ ಸರ್ಕಾರ ರಾಜಕೀಯ ಪ್ರೇರಿತವಾಗಿ ಸಿಬಿಐ ತನಿಖೆಗೆ ಸಮ್ಮತಿ ಸೂಚಿಸಿತ್ತು. ಸಿಬಿಐ ತನಿಖೆಗೆ ಸಮ್ಮತಿ ನೀಡುವಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಿಲ್ಲ ಹಾಗೂ ವಿವೇಚನೆ ಬಳಸಿಲ್ಲ. ಇದರಿಂದ ಹಾಲಿ ರಾಜ್ಯ ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿದೆ. ಅನುಮತಿ ಹಿಂಪಡೆಯಲು ಸರ್ಕಾರಕ್ಕೆ ಅಧಿಕಾರವಿದೆ. ಈ ಕ್ರಮ ಕಾನೂನು ಬಾಹಿರವಾಗಿಲ್ಲ. ಆದ್ದರಿಂದ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ
ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಅವರು ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪದ ತನಿಖೆ ನಡೆಸಲು 2019ರ ಸೆಪ್ಪಂಬರ್ 25ರಂದು ಅಂದಿನ ಬಿಜೆಪಿ ಸರ್ಕಾರ ಸಮ್ಮತಿ ನೀಡಿತ್ತು. ಬಿಜೆಪಿ ಸರ್ಕಾರದ ಆದೇಶವನ್ನು ಈಗಿನ ಕಾಂಗ್ರೆಸ್ ಸರ್ಕಾರ ವಾಪಾಸ್ ಪಡೆದಿತ್ತು. ಇದಲ್ಲದೆ ಪ್ರಕರಣ ಸಂಬಂಧ ಸಿಬಿಐ ಕೂಡ ಪ್ರತ್ಯೇಕ ಅರ್ಜಿ ಸಲ್ಲಿಸಿತ್ತು.
Post a comment
Log in to write reviews