ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ಹಾಲಿ ಮತ್ತು ಮಾಜಿ ಸಿಎಂಗಳ ನಡುವಿನ ವೈಯಕ್ತಿಕ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಪ್ರಜ್ವಲ್ ವಿದೇಶಕ್ಕೆ ಪರಾರಿಯಾಗಲು ಮಾಜಿ ಪಿಎಂ ಎಚ್.ಡಿ. ದೇವೇಗೌಡ ಅವರೇ ಕಾರಣ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, “ನಿಮ್ಮ ಮಗನನ್ನು ಸಾಯಿಸಲೆಂದೇ ನೀವು ವಿದೇಶಕ್ಕೆ ಕಳುಹಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಜೆಪಿ ನಗರದ ತಮ್ಮ ನಿವಾಸದ ಬಳಿ ಶನಿವಾರ ಸಿಎಂ ಹೇಳಿಕೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರೇ ನಿಮ್ಮ ಕುಟುಂಬದಲ್ಲಿಯೂ ಒಂದು ಘಟನೆ ನಡೆದಿದೆ. ನಿಮ್ಮ ಮಗ ವಿದೇಶದಲ್ಲಿ ಸಾವನ್ನಪ್ಪಿದ್ದಾನೆ. ಅವನು ಸಾಯಲೆಂದೇ ವಿದೇಶಕ್ಕೆ ನೀವು ಕಳುಹಿಸಿದ್ರಾ? ಅವರ ಸಾವಿಗೇ ನೀವೇ ಕಾರಣಾನಾ ಎಂದು ಹರಿಹಾಯ್ದರು.
ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದಿನ ಕುರಿತಂತೆ ಮಾತನಾಡಿದ ಕುಮಾರಸ್ವಾಮಿ,
ಈಗ ರಾಜತಾಂತ್ರಿಕ ಪಾಸ್‌ಪೋರ್ಟ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಅವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ. ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಬೇಕು ಎಂದು ಸಿಎಂ ಪತ್ರ ಬರೆದಿದ್ದಾರೆ. ಆದರೆ, ತಕ್ಷಣಕ್ಕೆ ಅದು ಸಾಧ್ಯವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯಗೆ ನಾಚಿಕೆ ಆಗುವುದಿಲ್ಲವೇ?
ಪಾಸ್‌ಪೋರ್ಟ್ ರದ್ದು ಸೇರಿದಂತೆ ಊಳಿದೆಲ್ಲ ಪ್ರಕ್ರಿಯೆ ಸಾಕಷ್ಟು ದಿನ ಆಗಬಹುದು ಎನ್ನುವ ಕಾರಣಕ್ಕೆ ತಕ್ಷಣವೇ ವಾಪಸ್ ಬಂದು ತನಿಖೆಗೆ ಹಾಜರಾಗುವಂತೆ ನಾನು ಸಂದೇಶ ನೀಡಿದ್ದೇನೆ. ದೇವೇಗೌಡರೂ ಸಹ ಕೊನೇ ಎಚ್ಚರಿಕೆ ನೀಡಿದ್ದಾರೆ. ಆದರೆ, ಮಾಧ್ಯಮ ಹೇಳಿಕೆ ಮೂಲಕ ದೇವೇಗೌಡರು ನೀಡಿದ ಎಚ್ಚರಿಕೆ ಬಗ್ಗೆ ಮುಖ್ಯಮಂತ್ರಿಗಳು ಹಗುರವಾಗಿ ಮಾತನಾಡುತ್ತಿದ್ದಾರೆ. ಎಷ್ಟು ವರ್ಷ ಅವರು ದೇವೆಗೌಡರ ಜತೆ ಕೆಲಸ ಮಾಡಿದ್ದಾರೆ? ಅವರು ಯಾವ ರೀತಿ ರಾಜಕಾರಣ ಮಾಡಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅದೇ ನಿಮ್ಮ ಕುಟುಂಬಕ್ಕೆ ಅನ್ವಯಿಸಿಕೊಂಡು ನೋಡಿ, ಆ ನೋವು ಏನು ಎನ್ನುವುದು ಗೊತ್ತಾಗುತ್ತದೆ. ನಿಮಗೆ ನಾಚಿಕೆ ಆಗೋದಿಲ್ಲವೇ? ತನಿಖೆಯ ದಾರಿ ತಪ್ಪಿಸುವ ಕೆಲಸ ನಾನು ಮಾಡಿದೆನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
Post a comment
Log in to write reviews