ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ನಟ ದರ್ಶನ್‌ಗೆ ಮನೆ ಊಟ ತರಿಸಿಕೊಳ್ಳುವ ಸಂಬಂಧ ಮುಂದಿನ 10 ದಿನಗಳೊಳಗೆ ಜೈಲು ಅಧಿಕಾರಿಗಳು ಈ ಕುರಿತಂತೆ ತೀರ್ಮಾನ ಕೈಗೊಳ್ಳಬೇಕು. ಆ ಸಂಬಂಧ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಮನೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ಒದಗಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಅಲ್ಲದೆ, ವಿಚಾರಣಾಧೀನ ಕೈದಿಗಳು ಖಾಸಗಿಯಾಗಿ ಆಹಾರ ತರಿಸಿಕೊಳ್ಳಬಹುದು. ಆದರೆ ಜೈಲು ಕೈಪಿಡಿ ಆಧರಿಸಿ ಮ್ಯಾಜಿಸ್ಟ್ರೇಟ್ ಅನುಮತಿ ನಿರಾಕರಿಸಿದ್ದಾರೆ. ಜೈಲು ಅಧಿನಿಯಮ ಸೆಕ್ಷನ್ 30ರ ಅಡಿ ಮನೆ ಊಟಕ್ಕೆ ಅವಕಾಶವಿದೆ. ಜೊತೆಗೆ, ಅರ್ಜಿದಾರ ದರ್ಶನ್ ಮಾತ್ರವಲ್ಲದೆ, ಎಲ್ಲ ಕೈದಿಗಳಿಗೂ ಪೌಷ್ಟಿಕ ಆಹಾರ ಅವಶ್ಯಕತೆ ಇದೆ. ಎಲ್ಲ ವಿಚಾರಣಾಧೀನ ಕೈದಿಗಳಿಗೂ ಅಗತ್ಯವಿದೆ. ಅರ್ಜಿದಾರರಿಗೂ ಇತರೆ ವಿಚಾರಣಾಧೀನ ಕೈದಿಗಳಿಗೂ ವ್ಯತ್ಯಾಸವಿಲ್ಲ ಎಂದು ತಿಳಿಸಿದ ನ್ಯಾಯಪೀಠ ವಿಚಾರಣೆಯನ್ನು ಆಗಸ್ಟ್ 20ಕ್ಕೆ ಮುಂದೂಡಿದೆ.
Post a comment
Log in to write reviews