Samayanews.

Samayanews.

2024-12-24 12:34:57

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕರ್ನಾಟಕದ ಪ್ರಮುಖ 5 ಜಲಪಾತಗಳ ಬಗ್ಗೆ ನಿಮಗೆಷ್ಟು ಗೊತ್ತು

ಒಂದು ರಾಜ್ಯ ಹಲವು ಜಗತ್ತು ಎನ್ನುವ ಕರ್ನಾಟಕದ ಪ್ರಾಕೃತಿಕ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ. ಅಲ್ಲಲ್ಲಿ ಹರಿಯುವ ಝರಿಗಳು ಹಸಿರನ್ನೆಲ್ಲ ತನ್ನ ಮೈ ಮೇಲೆ ಹೊದ್ದುಕೊಂಡಿರುವ ಬೆಟ್ಟ ಗುಡ್ಡಗಳು ಪ್ರವಾಸಿಗರನ್ನು ಸೆಳೆಯುವಲ್ಲಿ  ಯಶಸ್ವಿಯಾಗಿದೆ. ಇತ್ತ ಜಲಪಾತಗಳು  ಜನರ ಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ರಾಜ್ಯದ ಪ್ರಮುಖ 5 ಜಲಪಾತಗಳು ಯಾವುವು ಅದರ ವಿಶೇಷತೆ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

1)ಜೋಗ ಜಲಪಾತ. 
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಈ ಜಲಪಾತವನ್ನು ಜೋಗ ಜಲಪಾತ ಅಥವಾ ಗೇರು ಸೊಪ್ಪಿನ ಜಲಪಾತ ಎಂದು ಕರೆಯುತ್ತಾರೆ. ಇದು 292 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯ ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮುಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮುಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯರೂಪ ಪಡೆಯುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುವುದು. ಈ ಜಲಪಾತ ದೇಶದ 2 ನೇ ಅತಿ ಎತ್ತರದ ಜಲಪಾತವಾಗಿದೆ

2) ಅಬ್ಬಿ ಜಲಪಾತ
ಕೊಡಗು ಜಿಲ್ಲೆಯ ಇರುವ ಈ ಜಲಪಾತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಸುತ್ತಲೂ ದಟ್ಟವಾದ ಕಾಫಿ ತೋಟ ಮಧ್ಯ ಇರುವ ಈ ಜಲಪಾತದಲ್ಲಿ ನೀರು ಸುಮಾರು 30 ರಿಂದ 40 ಅಡಿ ಎತ್ತರದಿಂದ ಧುಮುಕುತ್ತದೆ. ಆ ಧುಮುಕುವ ರಭಸದಲ್ಲಿ ಅದು ಹಾಲಿನ ನೊರೆಯಂತೆ ಕಾಣುತ್ತದೆ. ಈ ಮನಮೋಹಕ ದೃಶ್ಯ ಪ್ರವಾಸಿಗರನ್ನು ಬಾಯಿಯ ಮೇಲೆ ಬೆರಳು ಹಿಡಿದು ನೋಡುವಂತೆ ಮಾಡುತ್ತದೆ.

3) ಹೆಬ್ಬೆ ಜಲಪಾತ
ಈ ಜಲಪಾತವು 551 ಅಡಿ ಎತ್ತರದಿಂದ ಎರಡು ಹಂತಗಳಲ್ಲಿ ದೊಡ್ಡ ಹೆಬ್ಬೆ (ದೊಡ್ಡ ಜಲಪಾತ) ಮತ್ತು ಚಿಕ್ಕ ಹೆಬ್ಬೆ (ಸಣ್ಣ ಜಲಪಾತಗಳು) ರೂಪಿಸಲು ಧುಮುಕುತ್ತದೆ.   ಈ ಜಲಪಾತ ಕರ್ನಾಟಕದ ಪ್ರಸಿದ್ಧ ಗಿರಿಧಾಮ ಕೆಮ್ಮಂಗುಂಡಿಯಿಂದ ಸುಮಾರು 10 ಕಿಮೀ ದೂರದಲ್ಲಿದೆ . ಈ ಜಲಪಾತವು ಕಾಫಿ ತೋಟದ ಒಳಗಿದ್ದು ಕಾಲ್ನಡಿಗೆ ಅಥವಾ ನಾಲ್ಕು ಚಕ್ರದ ವಾಹನಗಳ ಮೂಲಕ ತಲುಪಬಹುದು. ಈ ಪ್ರದೇಶದಲ್ಲಿ ಟ್ರೆಕ್ಕಿಂಗ್ ಆಯ್ಕೆಯೂ ಲಭ್ಯವಿದೆ. ಆದರೆ ಈ ಸ್ಥಳವು ವಿಶೇಷವಾಗಿ ಮಳೆಗಾಲದಲ್ಲಿ ಜಿಗಣೆಗಳಿಂದ ತುಂಬಿರುತ್ತದೆ. 

4) ಶಿವನ ಸಮುದ್ರ ಜಲಪಾತ
ಶಿವನ ಸಮುದ್ರ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿ ಶಿವನಸಮುದ್ರ ಎಂಬ ಪ್ರದೇಶದಲ್ಲಿದೆ. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಇಲ್ಲಿ 1902 ರಲ್ಲಿ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಒಂದನ್ನು ಸ್ಥಾಪಿಸಲಾಯಿತು. ಇಡೀ ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದಾಗಿದ್ದು,ಇಷ್ಟೇ ಅಲ್ಲದೆ,ಈ ಜಲವಿದ್ಯುತ್‌ ಉತ್ಪಾದನಾ ಕೇಂದ್ರದಿಂದ ಮೊದಲ ಬಾರಿಗೆ ಕೋಲಾರಕ್ಕೆ ವಿದ್ಯುತ್ತನ್ನು ಹರಿಸಲಾಗಿತ್ತು. 

5)ಇರ್ಪು ಜಲಪಾತ
ಇದು ಕೊಡಗಿನ ಒಂದು ಅಮೋಘವಾದ ಪ್ರವಾಸಿ ಸ್ಥಳವಾಗಿದೆ. ಈ ಜಲಪಾತವು ದಕ್ಷಿಣ ಕೊಡಗಿನ ಬ್ರಹ್ಮಗಿರಿ ಬೆಟ್ಟದ ಎಡ ಭಾಗದಿಂದ ಹರಿಯುತ್ತದೆ. ಇದಕ್ಕೆ ಲಕ್ಷಣ ತೀರ್ಥ ಎಂಬ ಹೆಸರು ಇದೆ. ತ್ರೆಥಾಯುಗದಲ್ಲಿ ರಾಮ ಲಕ್ಷಣರು ಸೀತೆಯನ್ನು ಅರಸುತ್ತ ಈ ನದಿ ದಾಟಿರುವ ಇತಿಹಾಸ ಇದೆ. ರಾಮನು ದಾಹದಿಂದ ಲಕ್ಷಣನಿಗೆ ನೀರು ತರಲು ಹೇಳಿದಾಗ,ಲಕ್ಷಣನು ಬ್ರಹ್ಮಗಿರಿ ಬೆಟ್ಟಕ್ಕೆ ಬಾಣ ಹೊಡೆದು ಬೆಟ್ಟದಿಂದ ನೀರನ್ನು ಚಿಮ್ಮಿಸಿದನು. ಇದರ ಪರಿಯಾಗಿ ಈ ನದಿಗೆ ಲಕ್ಷಣ ತೀರ್ಥ ಎಂಬ ಹೆಸರು ಬಂದಿರುವ ಇತಿಹಾಸವಿದೆ. ಈ ನದಿ ಇರ್ಪು ಜಲಪಾತ ಎಂಬ ಹೆಸರಿನಲ್ಲಿ ಹರಿಯುತ್ತದೆ. ಇದು 60 ಮೀಟರ್ ಎತ್ತರದಿಂದ ಹರಿಯುತ್ತದೆ. ಅಲ್ಲಿಂದ ಇದು ಹಸಿರು ತುಂಬಿದ ಬೆಟ್ಟಗಳ ನಡುವಿನಿಂದ ಹರಿಯುತ್ತದೆ. ಇದೊ೦ದು ಪುಣ್ಯ ಸ್ಥಳವಾಗಿದೆ. ಜನರು ಈ ನೀರನ್ನು ಪುಣ್ಯ ನೀರೆಂದು ನ೦ಬಿದ್ದಾರೆ ಆದ್ದರಿ೦ದ ಹೆಚ್ಚಗಿ ಸಾವಿರಾರು ಜನರು ಶಿವರಾತ್ರಿಯ ದಿನದಂದು ಈ ಸ್ಥಳಕ್ಕೆ ಆಗಮಿಸುತ್ತಾರೆ. ಜಲಪಾತವು ಬಹಳ ಪ್ರವಾಸಿ ಸ್ಥಳಗಳಿಗೆ ಹತ್ತಿರವಾಗಿದೆ. ಗೋಣಿಕೊಪ್ಪದಿಂದ 30 ಕಿ.ಮಿ, ಮಡಿಕೇರಿ ಇಂದ 80 ಕಿ.ಮಿ ಮತ್ತು ನಾಗರ ಹೊಳೆಯಿಂದ 25 ಕಿ.ಮಿ ದೂರದಲ್ಲಿದೆ. ಇದೊಂದು ಬಹು ಆಕರ್ಷಿತವಾದ ಪ್ರವಾಸಿ ಸ್ಥಳವಾಗಿದೆ. 


ಈ ಮೇಲೆ ತಿಳಿಸಿರುವ ಜಲಪಾತಗಳಷ್ಟೇ ಅಲ್ಲದೆ ಕರ್ನಾಟಕದಲ್ಲಿ ಇನ್ನೂ ಹಲವಾರು ಜನಮನ ಸೆಳೆಯುವ ಜಲಪಾತಗಳಿವೆ. ಪ್ರಮುಖವಾಗಿ ಈ ಮೇಲಿರುವ ಜಲಪಾತಗಳು ತಮ್ಮ ಪ್ರಾಕೃತಿಕ ಸೌಂದರ್ಯದಿಂದಾಗಿ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
 

img
Author

Post a comment

No Reviews