ಮುಚ್ಚಿಹೋಗಿದ್ದ ಪುರಾತನ ಕಾಲದ ನೂರಾರು ವಿವಿಧಾಕೃತಿಯ ನಾಗರಕಲ್ಲು ಪತ್ತೆ: ನೋಡಿ ಆಶ್ಚರ್ಯ ಪಟ್ಟ ಸ್ಥಳೀಯರು
ಕೋಲಾರ: ಮಣ್ಣಲ್ಲಿ ಮುಚ್ಚಿ ಹೋಗಿದ್ದ ನಾಗರಕಲ್ಲನ್ನು ಹೊರತೆಗೆಯಲು ಗುಂಡಿ ತೋಡಿದಾಗ ರಾಶಿ ರಾಶಿ ಪುತಾತನ ನಾಗರಕಲ್ಲುಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯ ಆಲಂಬಗಿರಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಶ್ರೀ ಆಂಜನೇಯಸ್ವಾಮಿ ದೇವಾಲಯಗಳು ಚಿಂತಾಮಣಿ ತಾಲೂಕಿನಲ್ಲಿರುವ ಪುರಾತನ ದೇವಾಲಯಗಳು. ಈಗ ದೇವಾಲಯದ ಸಮೀಪದಲ್ಲಿರುವ ಆಲಂಬಗಿರಿ ಕೆರೆ ಅಚ್ಚುಕಟ್ಟು ಪ್ರದೇಶದ ರಸ್ತೆ ಹೊಂದಿಕೊಂಡಿರುವ ಜಾಗದಲ್ಲಿ ನೂರಾರು ನಾಗರಕಲ್ಲುಗಳು ಪತ್ತೆಯಾಗಿವೆ.
ನಾಗರಕಲ್ಲು ಪತ್ತೆಯಾಗಿರುವ ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಪ್ರತಿಷ್ಠಾಪಿಸಿದ್ದ ನಾಗರ ಕಲ್ಲುಗಳಿಗೆ ನಾಗರಪಂಚಮಿ ಮತ್ತು ಗಣೇಶ ಚತುರ್ಥಿ ಸಂದರ್ಭದಲ್ಲಿ ಆಲಂಬಗಿರಿ ಗ್ರಾಮದ ಹೆಗ್ಗಡಿ ಮುನಿಯಪ್ಪ ಕುಟುಂಬದವರು ಪ್ರತಿವರ್ಷ ಪೂಜೆ ಸಲ್ಲಿಸುತ್ತಾ ಬಂದಿದ್ದರು. ನಂತರ ಹೆಗ್ಗಡಿ ಮುನಿಯಪ್ಪನವರು ನಿಧನರಾದ ನಂತರ ಸದರಿ ನಾಗರಕಲ್ಲುಗಳಿಗೆ ದಿನಗಳು ಕಳೆದಂತೆ ಪೂಜೆ ಸಲ್ಲಿವುದನ್ನು ನಿಲ್ಲಿಸಿದ್ದರು ಎಂದು ಹೇಳಗಾಗುತ್ತಿದೆ. ಇತ್ತೀಚೆಗೆ ಕುಟುಂಬದ ಸದಸ್ಯರು ಸಮಸ್ಯೆಯೊಂದರ ಬಗ್ಗೆ ಶಾಸ್ತ್ರ ಹೇಳುವವರ ಮೊರೆ ಹೋದಾಗ, ಪುರಾತನ ಕಾಲದಿಂದ ನಿಮ್ಮ ಕುಟುಂಬದವರು ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾ ಬಂದಿದ್ದರು. ಇದೀಗ ಆ ಕಲ್ಲುಗಳಿಗೆ ಪೂಜೆ ನಿಲ್ಲಿಸಿದ್ದು, ಕೂಡಲೇ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಹೆಗ್ಗಡಿ ಮುನಿಯಪ್ಪ ಕುಟುಂಬದ ಸದಸ್ಯರಾದ ಮೋಹನ್ ಬಾಬು, ಗಿರಿ, ಅಶೋಕ್ ಮತ್ತಿತರರು ಸದರಿ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲು ಬಂದಾಗ ನಾಗರ ಕಲ್ಲುಗಳು ರಸ್ತೆಯ ಪಕ್ಕದಲ್ಲಿ ಮುಚ್ಚಿ ಹೋಗಿದ್ದನ್ನು ಗಮನಿಸಿದ್ದಾರೆ. ಹೀಗಾಗಿ ಅವುಗಳನ್ನು ಮೇಲಕ್ಕೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಸುತ್ತಲೂ ಗುಂಡಿ ತೆಗೆದಾಗ ಹಲವು ನಾಗರ ಕಲ್ಲುಗಳು ಸಿಕ್ಕಿವೆ. ಆಶ್ಚರ್ಯವಾಗಿ ಮತ್ತಷ್ಟು ಗುಂಡಿ ತೆಗೆದಾಗ ವಿವಿಧ ಆಕೃತಿಯ ನೂರಕ್ಕೂ ಹೆಚ್ಚು ನಾಗರಕಲ್ಲುಗಳು ಪತ್ತೆಯಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಬೆಳ್ಳಂಬೆಳಗ್ಗೆಯೆ ಅಲಂಬಗಿರಿ, ಮುನುಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಮಂದಿ ಸಾರ್ವಜನಿಕರು ಸ್ಥಳಕ್ಕಾಗಮಿಸಿ ನಾಗರಕಲ್ಲುಗಳನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
Post a comment
Log in to write reviews