ನಾನೂ ಸಿಗರೇಟ್ ಸೇದುತ್ತಿದ್ದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ನಾನೂ ಮೊದಲು ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ವಿದೇಶಕ್ಕೆ ಹೋದಾಗ ಸ್ನೇಹಿತರು ಸಿಗರೇಟ್ ಪ್ಯಾಕ್ ತಂದುಬಿಟ್ಟಿದ್ದರು. ನಾನು ಕಡಿಮೆ ಅವಧಿಯಲ್ಲಿ ಹೆಚ್ಚು ಸಿಗರೇಟ್ ಸೇದಿಬಿಟ್ಟೆ ಎಂದು ತಾವು ಧೂಮಪಾನ ಮಾಡುತ್ತಿದ್ದ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಅವರು ಬಹಿರಂಗಗೊಳಿಸಿದ್ದಾರೆ.
ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಈ ವಿಚಾರವನ್ನು ಹೇಳಿದ್ದಾರೆ.
ಧೂಮಪಾನ ಮಾಡುವುದು ಸರಿಯಲ್ಲ ಎಂದು ಅವತ್ತೇ ನನಗೆ ಮನವರಿಕೆ ಆಯ್ತು. ಮನವರಿಕೆ ಆಗಿದ್ದುಆಗಸ್ಟ್ 27 ನೇ ತಾರೀಕಿನಂದು. ಅದೇ ದಿನ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ ಎಂದು ತಮ್ಮ ಹಳೇಯ ದಿನವನ್ನು ನೆನಪಿಸಿಕೊಂಡರು.
ದೈಹಿಕವಾಗಿ ಚಟುವಟಿಕೆ ಇಲ್ಲದೆ ಕುಳಿತವರಿಗೆ ಅನಾರೋಗ್ಯ ಹೆಚ್ಚು. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆ ಅಗತ್ಯ.
ಜೀವನಶೈಲಿ ಮತ್ತು ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಜನ ವರ್ಗಕ್ಕೆ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆಗೆ ಒದಗಿಸಲು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿ, ಜಾರಿ ಮಾಡುತ್ತಿದ್ದೇವೆ ಎಂದರು.
ಕ್ಯಾನ್ಸರ್ ನಂತಹ ಮಾರಕ ರೋಗವನ್ನೂ ಗುಣಪಡಿಸುವುದು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ದೀರ್ಘಕಾಲ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಿದೆ. ಹಿಂದಿನವರ ಆರೋಗ್ಯ ಪದ್ಧತಿ ಮತ್ತು ಶ್ರಮಾಧಾರಿತ ಜೀವನ ಶೈಲಿ ಅವರನ್ನು ಗಟ್ಟಿಮುಟ್ಟಾಗಿ ಸಧೃಡವಾಗಿ ಇಟ್ಟಿತ್ತು. ಇಂಥಾ ಆರೋಗ್ಯ ತಪಾಸಣಾ ಶಿಬಿರಗಳು ಮೇಲಿಂದ ಮೇಲೆ ಆಗಬೇಕು. ರಾಜ್ಯದ ಮೂಲೆ ಮೂಲೆಗಳಲ್ಲೂ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ತುಂಬಾ ವಯಸ್ಸಾದ ಮೇಲೆ ಬರುವ ಆರೋಗ್ಯ ಸಮಸ್ಯೆಗಳು ಬರದಂತೆ ವಯಸ್ಸಿದ್ದಾಗಲೇ ಪ್ರಯತ್ನಿಸಿ ಎಂದು ಕರೆ ನೀಡಿದರು.
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ.ರೇವಣ್ಣ, ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
Post a comment
Log in to write reviews