ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದರೆ, ಸಿದ್ದರಾಮಯ್ಯ ಚಿನ್ನದ ಪದಕ ವಿಜೇತ: ಬಿಜೆಪಿ ವ್ಯಂಗ್ಯ
ಬೆಂಗಳೂರು: ಮುಡಾ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿರುವ ಪ್ರತಿಪಕ್ಷ ಬಿಜೆಪಿ, ಸಾಮಾಜಿಕ ಮಾಧ್ಯಮಗಳಲ್ಲಿಯೂ ವಾಗ್ದಾಳಿ ಮುಂದುವರಿಸಿದೆ. ಇದೀಗ ಎಕ್ಸ್‌ನಲ್ಲಿ ಎರಡು ವಿಭಿನ್ನ ಸಂದೇಶಗಳನ್ನು ಪ್ರಕಟಿಸಿ ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ. ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡ ಬೆನ್ನಲ್ಲೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಟೀಕಾ ಪ್ರಹಾರ ತೀವ್ರಗೊಳಿಸಿದೆ. ಒಲಂಪಿಕ್ಸ್ ಜತೆ ಹೋಲಿಸಿ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ದೊರೆಯಬಹುದು ಎಂದು ವ್ಯಂಗ್ಯವಾಡಿದೆ.
ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ “ಖಚಿತ-ನಿಶ್ಚಿತ-ಖಂಡಿತ” ಎಂದು ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಫೋಟೊವನ್ನು ಬಿಜೆಪಿ ಪೋಸ್ಟ್ ಮಾಡಿದೆ. ಇದರಲ್ಲಿ ಸಿದ್ದರಾಮಯ್ಯ ಚಿನ್ನದ ಪದಕ, ನಾಗೇಂದ್ರ ಬೆಳ್ಳಿ ಹಾಗೂ ದದ್ದಲ್ ಕಂಚಿನ ಪದಕ ಧರಿಸಿರುವ ಎಡಿಟೆಡ್ ಫೊಟೊ ಪ್ರಕಟಿಸಲಾಗಿದೆ.
ಈ ಮಧ್ಯೆ, ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಆ ಬಗ್ಗೆಯೂ ಕುಹಕವಾಡಿರುವ ಬಿಜೆಪಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡಿ ಲೇವಡಿ ಮಾಡಿದೆ.
ನೆರೆಯಿಂದ ಹಾನಿಗೊಳಗಾದ ಕನ್ನಡಿಗರ ಕಂಬನಿ ಒರೆಸುವುದಕ್ಕಿಂತಲೂ, ಹೈಕಮಾಂಡ್ಗೆ ಕಪ್ಪ ತಲುಪಿಸುವ ಕಾರ್ಯದಲ್ಲಿ ಮಗ್ನವಾಗಿರುವ ಸಿಎಂ-ಡಿಸಿಎಂ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಆ ಕುರಿತು ಹೈಕಮಾಂಡ್ ಜೊತೆ ಚರ್ಚಿಸಲು ಸಿಎಂ ಹಾಗೂ ಡಿಸಿಎಂ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲಗಳ ಪ್ರಕಾರ, ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳ ಆರೋಪ ಹೆಚ್ಚಾಗುತ್ತಿದ್ದಂತೆಯೇ ಆ ಬಗ್ಗೆ ಚರ್ಚಿಸಲು ಸಿಎಂ ಹಾಗೂ ಡಿಸಿಎಂರನ್ನು ಹೈಕಮಾಂಡ್ ಕರೆಸಿಕೊಂಡಿದೆ ಎನ್ನಲಾಗಿದೆ.
Post a comment
Log in to write reviews