ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ. ಬಿ.ವೈ ವಿಜಯೇಂದ್ರ.
ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಅಂಜಲಿ ಎಂಬ ಯುವತಿಯ ಹತ್ಯೆಯ ಹಿನ್ನೆಲೆಯಲ್ಲಿ 'ಎಕ್ಸ್' ಮೂಲಕ ಪ್ರತಿಕ್ರಿಯಿಸಿರುವ ಅವರು, 'ಇನ್ನು ಎಷ್ಟು ಹೆಣ್ಣು ಮಕ್ಕಳ ಬಲಿಯಾಗಬೇಕು ಎಂದು ನಿಮ್ಮ ಸರ್ಕಾರ ಕಾಯುತ್ತಿದೆ ಎಂದು ರಾಜ್ಯದ ಜನ ನಿಮ್ಮನ್ನು ಪ್ರಶ್ನಿಸುತ್ತಿದ್ದಾರೆ' ಎಂದಿದ್ದಾರೆ.
ಪೊಲೀಸ್ ವ್ಯವಸ್ಥೆ ನಿಷ್ಕ್ರಿಯಗೊಳಿಸಿರುವ ನಿಮ್ಮ ಸರ್ಕಾರದ ನೆರಳಲ್ಲಿ ಅಮಾಯಕ ಹೆಣ್ಣುಮಕ್ಕಳು ರಕ್ಷಣೆಗಾಗಿ ಪರಿತಪಿಸಿ ಪ್ರಾಣ ಭೀತಿಯಿಂದ ತತ್ತರಿಸುತ್ತಿದ್ದಾರೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯ ಬೆನ್ನಲ್ಲೇ ಕೊಡಗಿನಲ್ಲಿ ಅಪ್ರಾಪ್ತೆ ಮೀನಾಳ ರುಂಡ ಕಡಿದು ರಾಕ್ಷಸನೊಬ್ಬ ಅಟ್ಟಹಾಸ ಮೆರೆದಿದ್ದ, ಈಗ ಆಕೆಯ ರಕ್ತ ಆರುವ ಮುನ್ನವೇ ಅಂಜಲಿ ಎಂಬ ಯುವತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ಘಟಿಸಿದೆ' ಎಂದಿದ್ದಾರೆ.
ರಾಜ್ಯ ಸರ್ಕಾರದ ಹಳಿ ತಪ್ಪಿರುವ ಕಾನೂನು ಸುವ್ಯವಸ್ಥೆಯ ಪರಿಣಾಮ 'ಕರ್ನಾಟಕ ಸ್ತ್ರೀ ಹಂತಕ ರಾಜ್ಯ' ಎಂಬ ಕುಖ್ಯಾತಿ ಪಡೆದುಕೊಳ್ಳುತ್ತಿದೆ. ನೇಹಾ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ತೋರಿದ ನಿರ್ಲಕ್ಷ್ಯದಿಂದಾಗಿ ಅಪರಾಧ ಕೃತ್ಯಗಳು ಸರಣಿ ರೂಪದಲ್ಲಿ ಘಟಿಸುತ್ತಿವೆ. ಈ ಕೂಡಲೇ ಅಂಜಲಿ ಹಂತಕನ ಸೆರೆ ಹಿಡಿದು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೇ ಕಾನೂನು ಸುವ್ಯವಸ್ಥೆ ಸುಭದ್ರಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
Post a comment
Log in to write reviews