ಕಾರವಾರ: ಮಳೆಗಾಲ ಆರಂಭವಾದ ಹಿನ್ನೆಲೆ ಅಕ್ರಮವಾಗಿ ಕಪ್ಪೆಗಳನ್ನು ಸಾಗಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ.
ಗೋವಾದ ಹೊಟೇಲ್‌ವೊಂದಕ್ಕೆ ಖಾಸಗಿ ಬಸ್‌ನಲ್ಲಿ ಸಾಗಾಟ ಮಾಡುತ್ತಿದ್ದ 40ಕ್ಕೂ ಹೆಚ್ಚು ಬುಲ್ ಕಪ್ಪೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರವಾರದಲ್ಲಿ ವಶಕ್ಕೆ ಪಡೆದಿದ್ದಾರೆ.
ಗೋವಾದಲ್ಲಿ ಜನರು ಸೇರಿ, ವಿದೇಶಿಗರಿಗೂ ಈ ಕಪ್ಪೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುತ್ತಾರೆ. ಇದಕ್ಕೆ 2 ರಿಂದ 3 ಸಾವಿರ ರೂ ದರ ಹೊಟೇಲ್‌ಗಳಲ್ಲಿ ಪಡೆಯಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶವಾದ ಕಾರವಾರ, ಅಂಕೋಲಾ ಸೇರಿದಂತೆ ಇತರ ಭಾಗದಿಂದ ಇವುಗಳನ್ನು ಕಳೆದ ಹಲವು ವರ್ಷಗಳಿಂದ ಮಳೆಗಾಲದ ವೇಳೆಗೆ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಒಂದು ದೊಡ್ಡ ಕಪ್ಪೆಗೆ ಕನಿಷ್ಟ 500 ರೂ. ದರ ನೀಡಲಾಗುತ್ತದೆ. ಹೀಗಾಗಿ ಇವುಗಳ ಬೇಟೆ ಕಾರವಾರ, ಅಂಕೋಲಾ ಭಾಗದಲ್ಲಿ ಅತೀ ಹೆಚ್ಚಿದ್ದು, ಜೀವಂತವಾಗಿ ಹಿಡಿದು ಗೋವಾಕ್ಕೆ ಸಾಗಿಸಲಾಗುತ್ತದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
ಅರಣ್ಯ ಕಾಯ್ದೆ ಅಡಿ ಈ ಕಪ್ಪೆಗಳ ಬೇಟೆ ಮಾಡುವುದು ಕಾನೂನು ಬಾಹಿರವಾಗಿದೆ. ಜಿಲ್ಲೆಯಲ್ಲಿ ಈ ಕಪ್ಪೆಗಳು ಮಳೆಗಾಲದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಈ ಕಪ್ಪೆಗಳ ಕಳ್ಳಸಾಗಾಟ ನಿರಂತರವಾಗಿ ನಡೆಯುತ್ತವೆ. ಕಳ್ಳ ಸಾಗಣೆದಾರರು ಹೊಲ, ಗಿಡಗಳ ಪೊದೆಗಳಲ್ಲಿ ಅಡಗಿರುವ ಕಪ್ಪೆಗಳನ್ನು ಹುಡುಕಿ ಹಿಡಿಯುತ್ತಾರೆ. ಬಳಿಕ ಗೋವಾಕ್ಕೆ ತೆಗೆದುಕೊಂಡು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಾರೆ. ಗಾತ್ರಗಳಿಗೆ ತಕ್ಕಂತೆ ವಿವಿಧ ಕಪ್ಪೆಗಳಿಗೆ ವಿವಿಧ ಬೆಲೆಗಳನ್ನು ನೀಡಿ ಖರೀದಿಸಲಾಗುತ್ತದೆ. ಗೋವಾದ ರೆಸ್ಟೋರೆಂಟ್‌ಗಳಲ್ಲಿ ವಿದೇಶಿಯರಿಗೆ ಪ್ರಿಯವಾದ ಆಹಾರ ಇದಾಗಿದ್ದು, ಹೆಚ್ಚು ಲಾಭ ತಂದುಕೊಡುತ್ತದೆ. ಈ ಕಾರಣದಿಂದಲೇ ಕಪ್ಪೆಗಳ ಅಕ್ರಮ ಸಾಗಾಟವಾಗುತ್ತಿದ್ದು, ಇದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Post a comment
Log in to write reviews