ಬಾಗಲಕೋಟೆ: ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡ ಅಂಕಿತಾ ಬಸಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗ್ರಾಮದವರಾಗಿರುವ ಅಂಕಿತಾ, ಮೆಳ್ಳಿಗೇರಿ ಮುರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿದ್ದರು ಇವರು 625ಕ್ಕೆ 625 ಅಂಕ ಪಡೆದು ಟಾಪರ್ ಆಗಿದ್ದಾರೆ. ಅಂಕಿತಾರನ್ನ ಕರೆದು ಸನ್ಮಾನಿಸಿದ್ದ ಸಿಎಂ 5 ಲಕ್ಷ ಪ್ರೋತ್ಸಾಹ ಧನ ನೀಡಿದ್ದರು.
ಪತ್ರದಲ್ಲಿ ಏನಿದೆ?
ಮಾನ್ಯ ಮುಖ್ಯಮಂತ್ರಿಗಳಿಗೆ ನಾನು ಮಾಡುವ ಸಾಷ್ಟಾಂಗ ಸಮಸ್ಕಾರಗಳು. ಈ ಬಾರಿ ಅಂದರೆ, 2023-24ನೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದು, ಇಡೀ ರಾಜ್ಯಕ್ಕೆ ಸಂತಸದ ಸಂಗತಿಯಾಗಿದೆ. ಅದರಲ್ಲೂ ಪ್ರತೀ ಬಾರಿ ಫಲಿತಾಂಶ ಎಂದೊಡನೆ ದಕ್ಷಿಣ ಕರ್ನಾಟಕದೆಡೆ ಮುಖ ಮಾಡುತ್ತಿದ್ದ ಜನ ಈ ಬಾರಿ ಉತ್ತರ ಕರ್ನಾಟಕದ ಕಡೆ ನೋಡುವಂತಾಗಿದೆ. ಒಬ್ಬ ಸಾಮಾನ್ಯ ಹುಡುಗಿಯೂ ಸಹ ತಾನಂದುಕೊಂಡಿದ್ದನ್ನು ಸಾಧಿಸಲಬಲ್ಲಳು ಎಂದು ತೋರಿಸಿಕೊಟ್ಟಿದ್ದಕ್ಕೆ ತುಂಬಾ ಹೆಮ್ಮೆ ಇದೆ. ನನ್ನನ್ನು ಬೆಂಗಳೂರಿಗೆ ಅಹ್ವಾನಿಸಿ, ತಮ್ಮ ಸ್ವ-ಗೃಹದವರೆಗೂ ಕರೆದು ಸನ್ಮಾನಿಸಿ, ಅಭಿನಂದಿಸಿ ನನ್ನ ಮುಂದಿನ ದಿನ ಭವಿಷ್ಯಕ್ಕೆ ನೆರವು ನೀಡಿದ್ದೀರಿ. ಅಷ್ಟೇ ಅಲ್ಲದೇ ತುಂಬು ಹೃದಯದಿಂದ ನನ್ನನ್ನು ಸತ್ಕರಿಸಿ, ಹರಸಿ, ಆಶೀರ್ವದಿಸಿದ್ದೀರಿ. ನಿಮ್ಮಿಂದಲೇ ಪ್ರಾರಂಭವಾದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೆಳ್ಳಗೇರಿಯಲ್ಲಿ ನಾನು ಓದಿದ್ದು, ಈ ಎಲ್ಲ ವಸತಿ ಶಾಲೆಗಳ ಪ್ರಾರಂಭಿಕ ಕಾರಣ ಭೂತರು ತಾವೆಂದು ತಿಳಿದು ಬಹಳ ಸಂತಸವಾಗಿದೆ. ಸಾಕಷ್ಟು ಸುವ್ಯವಸ್ಥೆಯುಳ್ಳ ಈ ಶಾಲೆಗಳು ಸರ್ಕಾರಿ ಶಾಲೆಗಳು ಎಂದು ಸಾಕಷ್ಟು ಜನರಿಗೆ ಇವುಗಳ ಬಗ್ಗೆ ತಪ್ಪು ಕಲ್ಪನೆ ಇದೆ. ಈ ಶಾಲೆ ಸಾಕಷ್ಟು ಬಡ ಪ್ರತಿಭೆಗಳಿಗೆ ಶಿಕ್ಷಣ ದೊರಕಿಸಿಕೊಟ್ಟು ಬಾಳಿಗೆ ದಾರಿದೀಪವಾಗಿವೆ. ನಿಮ್ಮನ್ನು ಭೇಟಿಯಾಗುವುದು ಎಂದರೇ ಜನಸಾಮಾನ್ಯರಿಗೆ ಎಟುಕದ ಮಾತು. ಅಂತಹ ಸಂದರ್ಭದಲ್ಲಿ ನನಗೆ ಈ ಅವಕಾಶ ಬಂದಿರುವುದಕ್ಕೆ ಬಹಳ ಸಂತೋಷವಿದೆ. ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ ಎಂದು ಕೇಳಿಕೊಳ್ಳುತ್ತೇನೆ ಅಂತ ಪತ್ರದಲ್ಲಿ ಬರೆದಿದ್ದಾರೆ.
Post a comment
Log in to write reviews