ಬೆಂಗಳೂರು: ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಿ, ಅರಣ್ಯ ಒತ್ತುವರಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಸೂಚನೆ ನೀಡಿದರು.
ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿಗಳು 2022, 2023ನೇ ಸಾಲಿನ ಪದಕ ವಿತರಿಸಿದರು. ಇದೇ ವೇಳೆ 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ವಿತರಿಸಿದರು. ಬಳಿಕ ವಾಕ್ ಆನ್ ದಿ ವೈಲ್ಡ್‌ಲೈಫ್ 2.0 ಎಂಬ ಪುಸ್ತಕ ಮತ್ತು ಕಿರುಹೊತ್ತಿಗೆಯೊಂದನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಸಿಎಂ, ಆಯಾ ವರ್ಷದ ಪದಕಗಳನ್ನು ಆಯಾ ವರ್ಷವೇ ವಿತರಿಸಬೇಕು. ಇದರಿಂದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಉತ್ಸುಕತೆಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಅರಣ್ಯವಾಸಿಗಳ ಶ್ರಮವನ್ನು ಗುರುತಿಸುವಲ್ಲಿ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಹಿನ್ನಡೆಯಾಗಬಾರದು ಎಂದು ಸೂಚಿಸಿದರು.
ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶೇ.20ರಷ್ಟು ಅರಣ್ಯ ಪ್ರದೇಶವಿದೆ. ಆದರೆ, ಅರಣ್ಯ ಸಚಿವ ಈಶ್ವರ್ ಖಂಡ್ರೆಯವರು ಶೇ.22ರಷ್ಟಿದೆ ಎಂದಿದ್ದಾರೆ. ಆದರೂ, ಇದು ನಿಗದಿತ ಶೇಕಡಾವಾರು ಪ್ರಮಾಣಕ್ಕಿಂತ ಕಡಿಮೆ ಇದೆ. ಹೀಗಾಗಿ ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಿ, ಅರಣ್ಯ ಪ್ರದೇಶ ಒತ್ತುವರಿಯನ್ನು ಕಟ್ಟಿನಿಟ್ಟಾಗಿ ತಡೆಯಬೇಕಿದೆ ಎಂದು ಹೇಳಿದರು.
ಬಳಿಕ ಮಾನವ-ಪ್ರಾಣಿ ಸಂಘರ್ಷದ ಕುರಿತು ಮಾತನಾಡಿದ ಸಿಎಂ, ಪ್ರಾಣಿಗಳು ಆಹಾರ ಮತ್ತು ನೀರು ಅರಸಿ ಅರಣ್ಯದಿಂದ ಹೊರಬರುತ್ತವೆ. ಆದ್ದರಿಂದ ಅರಣ್ಯ ಇಲಾಖೆಯು ನೀರು ಮತ್ತು ಆಹಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಯಾವುದೇ ಮಾನವ-ಪ್ರಾಣಿ ಸಂಘರ್ಷ ಮತ್ತು ಸಾವು ಸಂಭವಿಸದಂತೆ ಖಾತ್ರಿಪಡಿಸಬಹುದು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆಯವರು, ಈ ವರ್ಷದಿಂದ ಉಪ ವಲಯ ಅರಣ್ಯಾಧಿಕಾರಿಗಳ ಹಂತದವರೆಗಿನ ಅರಣ್ಯ ಸಿಬ್ಬಂದಿಗೆ ಕೌನ್ಸೆಲಿಂಗ್ ಆರಂಭವಾಗಲಿದ್ದು, ಮುಂದಿನ ವರ್ಷದಿಂದ ವ್ಯಾಪ್ತಿಯ ಅರಣ್ಯಾಧಿಕಾರಿಗಳ (ಆರ್‌ಎಫ್‌ಒ) ಹಂತದವರೆಗೆ ಕೌನ್ಸೆಲಿಂಗ್ ನಡೆಯಲಿದೆ ಎಂದು ತಿಳಿಸಿದರು.
ಎಚ್‌ಎಂಟಿಯಿಂದ ವಶಕ್ಕೆ ಪಡೆದ ಭೂಮಿಯನ್ನು ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್'ದಂತೆ ಸಸ್ಯಕಾಶಿಯಾಗಿ ನಿರ್ಮಾಣ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಈ ಹಿಂದೆ ಅರಣ್ಯ ಇಲಾಖೆ ಅಧೀನದಲ್ಲಿ 89 ಚದರ ಕಿ.ಮೀ ಹಸಿರು ಪ್ರದೇಶವಿತ್ತು. ಕಳೆದ 10 ವರ್ಷಗಳಲ್ಲಿ 5 ಚದರ ಕಿ.ಮೀ ಪ್ರದೇಶವನ್ನು ಕಳೆದುಕೊಂಡಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಬಳಿಕ ಮಾನವ-ಪ್ರಾಣಿ ಸಂಘರ್ಷ ತಡೆಯಲು ರೈಲ್ವೆ ಬ್ಯಾರಿಕೇಡ್ ಪರಿಹಾರವಾಗಿದ್ದು, 324 ಕಿ.ಮೀ. ತಡೆಗೋಡೆ ನಿರ್ಮಾಣಕ್ಕೆ 2 ವರ್ಷದಲ್ಲಿ 500 ಕೋಟಿ ರೂ. ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
Post a comment
Log in to write reviews