ಬೆಂಗಳೂರು, ಮೇ 28: ರಾಜ್ಯ ಅರಣ್ಯ ಇಲಾಖೆ ತನಗೆ ನೀಡಲಾಗಿದ್ದ ವಾರ್ಷಿಕ ಅನುದಾನ ಸಮರ್ಥವಾಗಿ ಬಳಸಿಕೊಂಡಿದ್ದು ಆದಾಯ ಹೆಚ್ಚಳವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಸಚಿವರಾಗಿ ಅಧಿಕಾರ ವಹಿಸಿಕೊಂಡು ವರ್ಷ ತುಂಬಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019-20ರ ಸಾಲಿನಲ್ಲಿ ಇಲಾಖೆಯ ರಾಜಸ್ವ ಸಂಗ್ರಹಣೆ 263.41 ಕೋಟಿಯಿಂದ 2023-24ರ ಸಾಲಿನಲ್ಲಿ 417.84 ಕೋಟಿ ರೂ.ಗೆ ಹೆಚ್ಚಳವಾಗಿದೆ. 2023-24ನೇ ಸಾಲಿನಲ್ಲಿ ಅಧಿಸೂಚಿತ ಕಾಯ್ದಿಟ್ಟ ಅರಣ್ಯ ಸೆಕ್ಷನ್ 17ರ ವ್ಯಾಪ್ತಿ 3395.73 ಹೆಕ್ಟೇರ್ ಅಂದರೆ ಸುಮಾರು 8300 ಎಕರೆ ಹೆಚ್ಚಳವಾಗಿದ್ದರೆ, ರಕ್ಷಿತ ಅರಣ್ಯ ಪ್ರದೇಶ 456 ಎಕರೆ ಹೆಚ್ಚಳವಾಗಿದೆ ಎಂದರು.
2600 ಎಕರೆ ಅರಣ್ಯ ಒತ್ತುವರಿ ತೆರವು
ರಾಜ್ಯದಲ್ಲಿ ಸುಮಾರು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ. 3 ಎಕರೆಗಿಂತಲೂ ಕಡಿಮೆ ಭೂಮಿ ಇರುವ ಬಡ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಹಾಗೂ 3 ಎಕರೆಗಿಂತಲೂ ಹೆಚ್ಚು ಅರಣ್ಯ ಒತ್ತುವರಿ ಮಾಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ 371 ಪ್ರಕರಣಗಳಲ್ಲಿ ಸುಮಾರು 2602.30 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ತೆರವು ಮಾಡಲಾದ ಅರಣ್ಯ ಭೂಮಿಯ ಮಾರುಕಟ್ಟೆ ಮೌಲ್ಯ ಸುಮಾರು 1500 ಕೋಟಿ ರೂ. ಆಗುತ್ತದೆ ಎಂದರು.
ಕೋಲಾರದಲ್ಲಿ ಅತಿ ಹೆಚ್ಚು ಅಂದರೆ 1392.41 ಎಕರೆ ಅರಣ್ಯ ಜಮೀನು ಒತ್ತುವರಿ ತೆರವು ಮಾಡಿಸಲಾಗಿದೆ. ಮಡಿಕೇರಿಯಲ್ಲಿ 50 ಗುಂಟೆ ತೆರವು ಮಾಡಲಾಗಿದೆ. ಬೆಂಗಳೂರಿನ ಕೊತ್ತನೂರಿನಲ್ಲಿ 17 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಸುಮಾರು 500 ಕೋಟಿ ರೂ.ಗೂ ಅಧಿಕ ಎಂದರು.
5 ಕೋಟಿ ಸಸಿ
ಕಳೆದ ವರ್ಷ ವಿಶ್ವ ಪರಿಸರ ದಿನದಂದು ಘೋಷಿಸಿದಂತೆ 5ಕೋಟಿ 40ಲಕ್ಷ ಸಸಿಗಳನ್ನು ರಾಜ್ಯದಾದ್ಯಂತ ನೆಡಲಾಗಿದೆ. ಸಸಿ ನೆಡುವ ಕಾರ್ಯಕ್ರಮಕ್ಕೆ ಹೆಚ್ಚುವರಿಯಾಗಿ 100 ಕೋಟಿ ರೂ. ಅನುದಾನ ನೀಡಲಾಗುತ್ತಿದೆ ಎಂದರು.
ಖಾಲಿ ಹುದ್ದೆಗಳ ಭರ್ತಿ
ಇಲಾಖೆಯಲ್ಲಿ ಸುಮಾರು 6 ಸಾವಿರ ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅರಣ್ಯ ವೀಕ್ಷಕರ 310 ಹುದ್ದೆಗಳ ನೇಮಕಾತಿಗೆ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ಪೂರ್ಣವಾಗಿದೆ. ನೀತಿ ಸಂಹಿತೆ ತೆರವಾದ ಬಳಿಕ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆಯ ಪೂರ್ವಾನುಮತಿಯ ಅವಶ್ಯಕತೆ ಇಲ್ಲ. ಹೀಗಾಗಿ ಈ ಭಾಗದಲ್ಲಿ ಖಾಲಿ ಇರುವ 10 ವಲಯ ಅರಣ್ಯಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಶೀಘ್ರ ಲಿಖಿತ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಉಪ ವಲಯ ಅರಣ್ಯಾಧಿಕಾರಿ (ಮೋಜಿಣಿದಾರರ) 143 ಹುದ್ದೆ, 45 ದ್ವಿತೀಯ ದರ್ಜೆ ಹಾಯಕರು ಮತ್ತು 18 ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ವಿವಿಧ ವೃಂದದ ಖಾಲಿ ಹುದ್ದೆಗಳ ನೇಮಕಾತಿಗೂ ಕರಡು ಪ್ರಸ್ತಾವನೆ ಸಿದ್ಧಗೊಂಡಿದೆ ಎಂದು ಅರಣ್ಯ ಸಚಿವರು ವಿವರಿಸಿದರು.
Post a comment
Log in to write reviews