ಬಾಗಲಕೋಟೆ: ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ರಾತ್ರಿ ವೇಳೆ ಕಾವಲುಗಾರರೇ ಇಲ್ಲ. ಇದರಿಂದ ವಿದ್ಯಾರ್ಥಿಗಳ ಸುರಕ್ಷತೆಯ ಆತಂಕ ಶುರುವಾಗಿದೆ.
ರಾಜ್ಯದಲ್ಲಿ ಒಟ್ಟು 136 ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿವೆ. ಇವುಗಳಲ್ಲಿ 96 ಬಾಲಕರ ಮತ್ತು 40 ಬಾಲಕಿಯರ ವಸತಿ ಗೃಹಗಳಿವೆ. ಬಾಲಕರ 96 ವಸತಿ ನಿಲಯಗಳಿಗೆ ರಾತ್ರಿ ವೇಳೆ ಕಾವಲುಗಾರರೇ ಇಲ್ಲ, ಈ ವಸತಿ ನಿಲಯಗಳ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸರಕಾರ ರಾತ್ರಿ ಕಾವಲುಗಾರರ ಹುದ್ದೆಗಳನ್ನು ತುಂಬಿಲ್ಲ ಎಂಬ ಮಾಹಿತಿ ಇದೆ.
ತಾರತಮ್ಯ: ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಮತ್ತು ನಂತರದ ವಸತಿಗೃಹಗಳಿಗೆ ರಾತ್ರಿ ಕಾವಲುಗಾರರ ಹುದ್ದೆಗಳ ಮಂಜೂರಾತಿ ಇದೆ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಗಳಲ್ಲಿ ಮಾತ್ರ ಕಾವಲುಗಾರರ ನೇಮಕ ಇಲ್ಲ. ಇದು ತಾರತಮಕ್ಕೆ ಕಾರಣವಾಗಿದ್ದು ಸರಕಾರ ಈ ಹಾಸ್ಟೆಲ್‌ಗಳಿಗೂ ರಾತ್ರಿ ಕಾವಲುಗಾರರ ಹುದ್ದೆಗಳನ್ನು ಭರ್ತಿ ಮಾಡಬೇಕು. ಆ ಮೂಲಕ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಪಾಲಕರ ಆಗ್ರಹವಾಗಿದೆ.
Post a comment
Log in to write reviews