ಬೇಜವಾಬ್ದಾರಿ ವರ್ತನೆ ಸಿಬ್ಬಂದಿ ಅಮಾನತು: ಬಿಜೆಪಿಗೆ ತಿರುಗೇಟು ಕೊಟ್ಟ ಸಾರಿಗೆ ಸಚಿವರು.
ಬೇಜವಾಬ್ದಾರಿಯಿಂದ ವರ್ತಿಸಿರುವ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಬಂಧ ರಾಜಕೀಯ ಮಾಡುವುದು ತರವಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ಗೆ ತಿರುಗೇಟು ನೀಡಿದ್ದಾರೆ.
ಧಾರವಾಡಕ್ಕೆ ಸೇರಿದ ಬಸ್ ನಲ್ಲಿ ಛತ್ರಿ ಹಿಡಿದುಕೊಂಡು ಬಸ್ ಚಾಲನೆ ಮಾಡಿದ ಹನುಮಂತಪ್ಪ ಅ ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಎಚ್. ಅವರನ್ನು ಸಂಸ್ಥೆಯ ಘನತೆಗೆ ಧಕ್ಕೆ ಹಾಗೂ ಬೇಜವಾಬ್ದಾರಿ ವಿಚಾರಕ್ಕಾಗಿ ಅಮಾನತು ಮಾಡಲಾಗಿದೆ. ಈ ಪ್ರಕರಣ ಸಂಬಂಧ ಬಿಜೆಪಿ ಶುಕ್ರವಾರ ಟ್ವೀಟ್ ಮಾಡಿ ಸರ್ಕಾರದ ವಿರುದ್ದ ಕಿಡಿಕಾರಿತ್ತು.
ಇದಕ್ಕೆ ಸ್ಪಷ್ಟೀಕರಣ ನೀಡಿರುವ ಸಚಿವರು, ಬಿಜೆಪಿಯು ಉತ್ತರಕುಮಾರನ ಪೌರುಷ ತೋರಿಸುತ್ತಿದೆ. ಈ ಸಂತೋಷಕ್ಕೆ ಕಡಿವಾಣ ಹಾಕಬೇಕು. ಕೆಲವರಿಗೆ ಕಣ್ಣಿರುತ್ತದೆ ಆದರೆ ನೋಡಲು ಸಾಧ್ಯವಾಗದ ಸ್ಥಿತಿ, ತಲೆ ಇರುತ್ತದೆ ಬುದ್ದಿ ಸರಿಯಾಗಿ ಉಪಯೋಗಿಸಲಾಗದ ಪರಿಸ್ಥಿತಿ, ಇವೆಲ್ಲವೂ ಅನ್ವಯಿಸುವುದು ಬಸನಗೌಡ ಯತ್ನಾಳ್, ಆರ್.ಅಶೋಕ್ ಹಾಗು ಅಶ್ವತ್ ಸಿ. ಎನ್ ಅವರನ್ನ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ಬಿಜೆಪಿ ಗೆ ಕಣ್ಣು, ತಲೆ ಯಾವುದೂ ಸರಿಯಾಗಿ ಕನೆಕ್ಟ್ ಆಗದೆ ಇರೋ ಪಂಡಿತ ಪುತ್ರರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ಎಂದು ಕಿಡಿಕಾರಿದ್ದಾರೆ. ಪ್ರಕರಣ ಸಂಬಂಧ ಈ ವಿಡಿಯೋ ನೋಡಿದರೆ ಚಾಲಕ ಹಿಡಿದಿರುವ ಕೊಡೆ ಮೇಲೆ ಒಂದೇ ಒಂದು ಹನಿ ನೀರು ಕಾಣುತ್ತಿಲ್ಲ ಅದನ್ನು ನೋಡುವ, ಯೋಚಿಸುವ ವ್ಯವಧಾನ, ಬುದ್ದಿಯಾದರೂ ಬೇಡವೇ ಇವರಿಗೆ? ಬಿಜೆಪಿ ಅವಧಿಯಲ್ಲಿ ರಾಜ್ಯದ ಸಾರಿಗೆ ಸಂಸ್ಥೆಗಳನ್ನು ರೂ.5900 ಕೋಟಿ ಸಾಲದ ಸುಳಿಯಲ್ಲಿ ಮುಳುಗಿಸಿ ಹೋಗಿರುವ ಕೀರ್ತಿವಂತರು. ಅವರ ಅವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆಯಾಗಿಲ್ಲ. ಡಕೋಟ ಬಸ್ಸುಗಳನ್ನು ಕಲ್ಪಿಸಿರುವ ಸಾಧನೆಯಾಗಿದೆ ಎಂದು ಕಾಲೆಳೆದಿದ್ದಾರೆ.
ಬಿಜೆಪಿ ಅವಧಿಯಲ್ಲಿ ನೇಮಕಾತಿ ಮರೀಚಿಕೆಯಾಗಿತ್ತು. ನಮ್ಮಅವಧಿಯಲ್ಲಿ ಹೊರಡಿಸಿದ್ದ ನೇಮಕಾತಿ ಪ್ರಕಟಣೆಗೂ ತಡೆ ನೀಡಿದ್ದ ಕೀರ್ತಿ ಬಿಜೆಪಿ ಗೆ ಅವರಿಗೆ ಸಲ್ಲಬೇಕು. ನಮ್ಮ ಸರ್ಕಾರ ಬಂದೊಡನೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಚಾಲನೆ ನೀಡಿದೆ. ಬಿಜೆಪಿ ಅವಧಿಯಲ್ಲಿ ತಡೆ ಹಿಡಿಯಲಾಗಿದ್ದ ನೇಮಕಾತಿಗೆ ಚಾಲನೆ ನೀಡಲಾಗಿದೆ. 13999 ಹುದ್ದೆಗಳು ಖಾಲಿಯಿದ್ದು, ತಾಂತ್ರಿಕ ಸಿಬ್ಬಂದಿ ಹಾಗೂ ಚಾಲಕ ನಿರ್ವಾಹಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಇತರೆ ನೇಮಕಾತಿ ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದು ತಿರುಗೇಟು ನೀಡಿದ್ದಾರೆ.
ಇದಲ್ಲದೆ ಬಿಜೆಪಿಯವರು ಸಾರಿಗೆ ಸಂಸ್ಥೆಗಳಿಗೆ ದಯಪಾಲಿಸಿದ ದುರಂತ ಕಥೆಗಳನ್ನು ಮತ್ತೊಮ್ಮೆ ಮಗದೊಮ್ಮೆ ನೆನಪಿಸಲು ನಮಗೆ ಅವರೇ ಅವಕಾಶ ಮಾಡಿಕೊಡುವುದರ ಹಿಂದಿನ ಉದ್ದೇಶ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಪ್ರಚಾರ ನೀಡುವುದು ಎಂದಾದರೆ ನಮಗೇನು ಅಭ್ಯಂತರವಿಲ್ಲ ಎಂದು ಮಾರ್ಮಿಕವಾಗಿ ಜಾಲತಾಣ “ಎಕ್ಸ್” ಮೂಲಕ ಉತ್ತರಿಸಿದ್ದಾರೆ.
Post a comment
Log in to write reviews