ಪುಣೆ: ದೇಶಾದ್ಯಂತ ಚರ್ಚೆಗೆ ಕಾರಣವಾದ ಪುಣೆಯ ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ರಾಜಕೀಯ ಪ್ರಭಾವ ಕೆಲಸ ಮಾಡಿರುವ ಬಗ್ಗೆ ಈಗ ಭಾರಿ ಚರ್ಚೆ ಆರಂಭವಾಗಿದೆ. ಅಪಘಾತ ಸಂಭವಿಸಿದ ಬಳಿಕ ಬಾಲ ಆರೋಪಿ ತಂದೆ ವಿಶಾಲ್ ಅಗರ್ವಾಲ್ ಅವರು ಸ್ಥಳೀಯ ಶಾಸಕ ಸುನಿಲ್ ಅವರಿಗೆ ಸುಮಾರು 45 ಬಾರಿ ಮಿಸ್ ಕಾಲ್ ಮಾಡಿದ್ದ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿ ವೇಗವಾಗಿ ಪೋರ್ಶೆ ಕಾರು ಚಾಲನೆ ಮಾಡಿ ಇಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಬಾಲ ಆರೋಪಿ ವೇದಾಂತ್ ಅಗರ್ವಾಲ್ (17) ತಂದೆ ಬಿಲ್ಡರ್ ವಿಶಾಲ್ಅಗರ್ವಾಲ್ ಅವರು ಪ್ರಕರಣದ ದಿಕ್ಕು ತಪ್ಪಿಸಲು ಸಹಾಯ ಮಾಡುವಂತೆ ಕೋರಿ ಸಸೂನ್ ಆಸ್ಪತ್ರೆಯ ವೈದ್ಯರಿಗೆ 20ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ನಡೆದಿದ್ದ ಮೇ 19ರ ಕೆಲವೇ ಸಮಯದಲ್ಲಿ ವೈದ್ಯರಿಗೆ ವಿಶಾಲ್ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಕ್ತದ ಮಾದರಿ ಬದಲಿಸುವಂತೆ ವಿಶಾಲ್ ವೈದ್ಯರಿಗೆ 3 ಲಕ್ಷ ರೂ ಲಂಚ ನೀಡಿರುವ ಸಂಬಂಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಬಂಧನಕ್ಕೆ ಒಳಗಾಗಿರುವ ಸಸೂನ್ ಆಸ್ಪತ್ರೆಯ ವೈದ್ಯರಾದ ಅಜಯ್ ತಾವೆ ಮತ್ತು ಶ್ರೀಹರಿ ಹಲ್ಲೋರ್ ಅವರನ್ನು ವಿಚಾರಣೆಗೆ ಒಳಪಡಿಸಿ ದೂರವಾಣಿ ಕರೆಗಳನ್ನು ಪರಿಶೀಲಿಸಿದಾಗ ಈ ಅಂಶ ಬಯಲಾಗಿದೆ. ಅಲ್ಲದೆ, ನ್ಯಾಯಾಲಯದಲ್ಲಿ ತನ್ನ ಮಗ ಸಿಕ್ಕಿ ಹಾಕಿಕೊಳ್ಳದಂತೆ ಕೃತಕ ಬುದ್ಧಿಮತ್ತೆ ಬಳಸಿ ಅಪಘಾತದ ದೃಶ್ಯಗಳನ್ನು ಮರುಸೃಷ್ಟಿಸಲು ಖಾಸಗಿ ಏಜೆನ್ಸಿಗಳನ್ನು ವಿಶಾಲ್ ಸಂಪರ್ಕಿಸಿದ್ದಾರೆ. ಸಸೂನ್ ಆಸ್ಪತ್ರೆಗೆ ಕಾವಲುಗಾರರನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಲವರ ವಿಚಾರಣೆ
ಪೋರ್ಶೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ವೇದಾಂತ್ ಸ್ನೇಹಿತನನ್ನು ಪೊಲೀಸರು 6 ಗಂಟೆ ವಿಚಾರಣೆ ನಡೆಸಿದ್ದು, ಕುಡಿದ ಮತ್ತಿನಲ್ಲಿ ವೇದಾಂತ್ ಕಾರು ಓಡಿಸುತ್ತಿದ್ದ ಎಂದು ಬಾಯಿ ಬಿಟ್ಟಿದ್ದಾನೆ. ಸ್ನೇಹಿತನ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇನ್ನೂ ಅಪಘಾತ ನಡೆದು 15 ಗಂಟೆಗಳಲ್ಲಿಯೇ ಕ್ಷುಲ್ಲಕ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದ್ದ ಬಾಲಾರೋಪ ನ್ಯಾಯ ಮಂಡಳಿಯ ಇಬ್ಬರು ಸದಸ್ಯರಿಗೆ ಸಂಕಷ್ಟ ಎದುರಾಗಿದ್ದು, ಇವರ ವಿರುದ್ಧ ಮಹಾರಾಷ್ಟ್ರ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ಆಯುಕ್ತರ ನೇತೃತ್ವದಲ್ಲಿ ಸಮಿತಿಯು ತನಿಖೆ ನಡೆಸುತ್ತಿದೆ.
Post a comment
Log in to write reviews