ಮೈಸೂರು:ಈ ಹಿಂದೆ ಜೆಡಿಎಸ್ ವಿರುದ್ಧ ಬಿಜೆಪಿ ಜಾಹೀರಾತು ನೀಡಿದ್ದು ಅದೀಗ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರವಾಗಿದೆ. ಜಾಹೀರಾತು ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಮೈತ್ರಿ ದೋಸ್ತಿಗೆ ಠಕ್ಕರ್ ಕೊಡಲು ಮುಂದಾಗಿದೆ. ಇಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ನೀಡಿದ್ದ ಜಾಹೀರಾತನ್ನು ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ತಿರ್ಮಾನಿಸಿದೆ.
ವಾಲ್ಮೀಕಿ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮೈಸೂರು ಚಲೋ ಪಾದಯಾತ್ರೆಯನ್ನು ಆರಂಭಿಸಿವೆ. ಈ ನಡುವೆ ಬಿಜೆಪಿ ನೀಡಿದ್ದ ಜಾಹೀರಾತನ್ನು ಕಾಂಗ್ರೆಸ್ ಬಳಸಿಕೊಂಡು ಮೈತ್ರಿ ಪಕ್ಷಗಳಿಗೆ ಸೆಡ್ಡು ಹೊಡೆಯಲು ನಿಂತಿದೆ.
ಇಂದು ಮಹಾರಾಜ ಮೈದಾನದಲ್ಲಿ ಬೆಳಗ್ಗೆ ಹನ್ನೊಂದು ಗಂಟೆಗೆ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯಲಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಸಚಿವರು, ಶಾಸಕರು, ಮಾಜಿ ಶಾಸಕರು, ಲೋಕಸಭಾ ಸದಸ್ಯರು, ಮಾಜಿ ಸಂಸದರು, ಎಲ್ಲಾ ಜಿಲ್ಲಾ, ನಗರ ಸಮಿತಿ ಅಧ್ಯಕ್ಷರು ಹಾಗೂ ಇನ್ನಿತರ ಕಾಂಗ್ರೆಸ್ ಪದಾಧಿಕಾರಿಗಳನ್ನು ಒಳಗೊಂಡಂತೆ 300ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆಯಾ ಕ್ಷೇತ್ರದ ಶಾಸಕ ಬೆಂಬಲಿಗರು ಸೇರಿದಂತೆ ಅನೇಕರು ಈ ಸಮಾವೇಶದ ಜವಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಬಿಜೆ ವಿಜಯಕುಮಾರ್ ತಿಳಿಸಿದ್ದಾರೆ.
ಇನ್ನೂ ಸಮಾವೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಭ್ರಷ್ಟಾಚಾರಗಳನ್ನು ದಾಖಲೆ ಸಮೇತ ಬಿಚ್ಚಿಡಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಒತ್ತಾಯಿಸುತ್ತಿರುವ ಮೈತ್ರಿ ಪಕ್ಷಗಳಿಗೆ ಪ್ರತ್ಯುತ್ತರ ಕೊಡಲು ಕಾಂಗ್ರೆಸ್ ಮುಂದಾಗಿದೆ. ವಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಕೋಪಗೊಂಡಿದ್ದು ತಕ್ಕ ಪಾಠ ಕಲಿಸಲು ಇಂದು ಸಮಾವೇಶ ಆಯೋಜಿಸಲಾಗಿದೆ. ಮುಖ್ಯವಾಗಿ ಈ ಹಿಂದೆ ಬಿಜೆಪಿ ಜೆಡಿಎಎಸ್ ವಿರುದ್ಧ ನೀಡಿದ್ದ ಜಾಹೀರಾತನ್ನು ಅಸ್ತ್ರವಾಗಿ ಬಳಕೆ ಮಾಡಲಾಲು ಕಾಂಗ್ರೆಸ್ ನಿರ್ಧರಿಸಿದೆ. ಇನ್ನೂ ಸಮಾವೇಶ ನಡೆಯುವ ಸ್ಥಳಕ್ಕೆ ಸ್ವತ: ಸಿಎಂ ಸಿದ್ದರಾಮಯ್ಯ ಅವರೇ ಭೇಟಿ ನೀಡಿ ಸಿದ್ಧತಾ ಕಾರ್ಯವನ್ನು ಕಳೆದ ದಿನ ಪರಿಶೀಲಿಸಿದ್ದಾರೆ. ಶಾಮಿಯಾನದ ಮಾಲೀಕ ಷರೀಫ್ ಅವರು ಗಣ್ಯರು ಕೂರುವ ವೇದಿಕೆ, ಸಾರ್ವಜನಿಕರು ಆಸೀನರಾಗುವ ಜಾಗ, ಪ್ರವೇಶ ಸೇರಿದಂತೆ ಮತ್ತಿತರ ವಿಚಾರಗಳ ಬಗ್ಗೆ ವಿವರಿಸಿದರು. ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಿರುವುದು ಮತ್ತು ಆಸನ ವ್ಯವಸ್ಥೆ ಜಾಗದ ಬಗ್ಗೆ ವಿವರಣೆ ಕೇಳಿ ಪಡೆದುಕೊಂಡಿದ್ದಾರೆ. ಸಿಎಂ ಅವರೇ ಪ್ರತಿಯೊಂದನ್ನು ಗಮನಿಸಿ ಮಾಹಿತಿ ಪಡೆದರಲ್ಲದೆ, ಧ್ವನಿವರ್ಧಕ ಎರಡು ಕಿಲೋ ಮೀಟರ್ ತನಕವೂ ಇರುವಂತೆ ಅಳವಡಿಸಲು ಸೂಚನೆ ನೀಡಿದ್ದಾರೆ.
Post a comment
Log in to write reviews