ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ: ಕೋಲಾರದಲ್ಲಿ ಪರೀಕ್ಷಾರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಿಸಿದ ಡಿಸಿ
ಕೋಲಾರ :ಇಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ (KAS Prelims Exam) ಹಿನ್ನೆಲೆ ಕೋಲಾರ ಜಿಲ್ಲಾಡಳಿತ ಪರೀಕ್ಷಾರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ.
ಕೋಲಾರ ಜಿಲ್ಲಾಧಿಕಾರಿ (Kolar DC) ಅಕ್ರಂ ಪಾಷಾರಿಂದ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. 12 ಪರೀಕ್ಷಾ ಕೇಂದ್ರಗಳಲ್ಲಿ ಕೆಪಿಎಸ್ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಬರೆಯಲು ಬೇರೆಡೆಯಿಂದ ಆಗಮಿಸುವ ಅಭ್ಯರ್ಥಿಗಳಿಗೆ ಕೋಲಾರದ KEB ಸಮುದಾಯ ಭವನ, ಹಾಲಿಸ್ಟರ್ ಸಮುದಾಯ ಭವನ, ಶತಶೃಂಗ ಪೊಲೀಸ್ ಸಮುದಾಯ ಭವನ, ನಚಿಕೇತ ಹಾಸ್ಟೆಲ್ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಡಿಸಿ ಅಕ್ರಂ ಪಾಷಾ ಅವರು ಕೆಪಿಎಸ್ಸಿ ಪರೀಕ್ಷಾರ್ಥಿಗಳಿಗೆ ಊಟ, ಕುಡಿಯುವ ನೀರು, ವಸತಿ ವ್ಯವಸ್ಥೆ ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಿದ್ದಾರೆ.
ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆಯ ಪತ್ರಿಕೆ 1 ಪರೀಕ್ಷೆಯನ್ನು ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 12-00 ಗಂಟೆವರೆಗೆ ನಡೆಸಲಾಗುತ್ತದೆ. ಪತ್ರಿಕೆ 2 ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ನಡೆಸಲಾಗುತ್ತದೆ. ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಇಂದು ನಡೆಸುತ್ತಿದೆ.
ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ನಿಯೋಜನೆ
ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂದು ಹೆಚ್ಚುವರಿ ಸರ್ಕಾರಿ ಬಸ್‌ಗಳನ್ನು ನಿಯೋಜಿಸಲು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇಂದು 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಎಎಸ್ ಪೂರ್ವಭಾವಿ ಪರೀಕ್ಷೆ ಬರೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಓಡಾಟಕ್ಕೆ ಅನುಕೂಲವಾಗಲು ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಸೂಚನೆ ನೀಡಲಾಗಿದೆ. ಹೆಚ್ಚುವರಿ ಸಾರಿಗೆ ಅನುಕೂಲಕ್ಕೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ. ಎಸ್ ಆದೇಶ ಹೊರಡಿಸಿದ್ದಾರೆ.
Post a comment
Log in to write reviews