ಬೆಂಗಳೂರು: ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಐಪಿಎಲ್ನಲ್ಲಿ(IPL 2025) ಆರ್ಸಿಬಿ(RCB) ಪರ ಆಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಲೇ ಇದೆ. ಇದೀಗ ರಾಹುಲ್ ಆರ್ಸಿಬಿ ಸೇರುವ ಕುರಿತು ಮತ್ತೊಂದು ಬಿಗ್ ಅಪ್ಡೇಟ್ ಸಿಕ್ಕಿದೆ. ಹೌದು, ರಾಹುಲ್ ಅವರನ್ನು ಆರ್‌ಸಿಬಿಗೆ ಕರೆತರಲು ಅವರ ಗೆಳೆಯ ವಿರಾಟ್ ಕೊಹ್ಲಿ(Virat Kohli) ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವರ್ಷ ನಡೆದಿದ್ದ ಐಪಿಎಲ್ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. ಇದೀಗ ಕೊಹ್ಲಿ ಮತ್ತೆ ರಾಹುಲ್ ಅವರನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ಬೇಸರಗೊಂಡಿರುವ ರಾಹುಲ್ ಈ ಬಾರಿ ಲಕ್ನೋ ತೊರೆಯುವುದು ಬಹುತೇಕ ಖಚಿತವಾಗಿದೆ. ಈ ಬಾರಿ ಆರ್ಸಿಬಿ ಕೇವಲ ಮೂರು ಆಟಗಾರರನ್ನು ಮಾತ್ರ ರೀಟೈನ್ ಮಾಡಿಕೊಳ್ಳಲಿದೆ ಎನ್ನಲಾಗಿದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ವಿಲ್ ಜಾಕ್ಸ್ ಈ ಮೂವರು ಆಟಗಾರರು ಎನ್ನಲಾಗಿದೆ. ಕಳೆದ ಮೂರು ಸೀಸನ್ನಲ್ಲಿ ಫಾಫ್ ಡು ಪ್ಲೆಸಿಸ್ ಆರ್ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಹೀಗಾಗಿ ಅವರನ್ನು ಈ ಬಾರಿ ತಂಡದಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿಯೇ ಮತ್ತೆ ಆರ್‌ಸಿಬಿಗೆ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ವಿರಾಟ್ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.
ವಿರಾಟ್ ಕೊಹ್ಲಿ 2013ರಲ್ಲಿ ಆರ್ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್ಸಿಬಿಯನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಇತಿಹಾಸದಲ್ಲಿ ವಿನ್ನಿಂಗ್ಸ್ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.
Post a comment
Log in to write reviews