ಕುದುರೆಮುಖ, ನೇತ್ರಾವತಿ ಬೆಟ್ಟದಲ್ಲಿ ಚಾರಣಕ್ಕೆ ಅನುಮತಿ: ಕಂಡೀಷನ್ಸ್ ಅಪ್ಲೈ!
ಚಿಕ್ಕಮಗಳೂರು: ಮಳೆಗಾಲದಲ್ಲಿ ಚಾರಣಕ್ಕೆ ತೆರಳುವ ಟ್ರಕ್ಕಿಂಗ್ ಪ್ರಿಯರಿಗೆ ಅರಣ್ಯ ಇಲಾಖೆ ಸಿಹಿ ಸುದ್ದಿ ನೀಡಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮತ್ತು ನೇತ್ರಾವತಿ ಬೆಟ್ಟದಲ್ಲಿ ಚಾರಣಕ್ಕೆ ಅತಿ ಹೆಚ್ಚಿನ ಚಾರಣಿಗರ ಒತ್ತಡವಿದ್ದು, ಇದೀಗ ಈ ಜಾಗದಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.
ಈ ಜಾಗದಲ್ಲಿ ಟ್ರಕ್ ಮಾಡುವ ಪ್ರವಾಸಿಗಳಿಗಾಗಿಯೇ www.kudremukhanationalpark.in ವೆಬ್ ಸೈಟ್ ತೆರೆಯಲಾಗಿದ್ದು ಚಾರಣಿಗರು ಆನ್ ಲೈನ್ ಮೂಲಕವೇ ಬುಕ್ಕಿಂಗ್ ಮಾಡಿಕೊಳ್ಳಬೇಕು.
ಯಾವುದೇ ಕಾರಣಕ್ಕೂ ಆಫ್ ಲೈನ್ ಬುಕ್ಕಿಂಗ್ ಗೆ ಅವಕಾಶ ಇರುವುದಿಲ್ಲ. ಇನ್ನು ಒಬ್ಬ ವ್ಯಕ್ತಿಯು ಗರಿಷ್ಠ 3 ಜನರ ಹೆಸರಿನಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ. ಈ ಹೊಸ ನಿಯಮ ಜೂನ್ 25ರಿಂದ ಜಾರಿಗೆ ಬರಲಿದ್ದು, ಎರಡೂ ಗಿರಿಶ್ರೇಣಿಯಲ್ಲಿ ದಿನಕ್ಕೆ ಗರಿಷ್ಠ 300 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅದರಲ್ಲೂ ವಾರಾಂತ್ಯದಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ ಕೇವಲ 200 ಜನರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಸ್ಥಳೀಯ 50 ಜನರಿಗೆ ಪ್ರತ್ಯೇಕ ಬುಕ್ಕಿಂಗ್ ವ್ಯವಸ್ಥೆ ರೂಪಿಸಿದ್ದು, ಕುದುರೆಮುಖ ಅಥವಾ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ ಬುಕಿಂಗ್ ಲಾಗಿನ್ ಐಡಿ ಪಡೆದು ನೋಂದಾಯಿಸಿಕೊಳ್ಳಬಹುದಾಗಿದೆ.
ಕೊನೆ ಕ್ಷಣದಲ್ಲಿ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು 50 ಪ್ರವಾಸಿಗರಿಗೆ ತತ್ಕಾಲ್ ರೂಪದಲ್ಲಿ ಬುಕ್ಕಿಂಗ್ ಗೆ ಅವಕಾಶ ಇರಲಿದೆ. ಪ್ರತಿ ಗುರುವಾರ ಮಧ್ಯಾಹ್ನದ ನಂತರ ತತ್ಕಾಲ್ ಬುಕ್ಕಿಂಗ್ ಮಾಡಬಹುದು ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವರಾಮ ಬಾಬು ತಿಳಿಸಿದ್ದಾರೆ.
ಚಾರಣಕ್ಕೆ ಪ್ರತಿ ತಿಂಗಳ 25ನೇ ತಾರೀಕಿನಂದು ಮುಂದಿನ 30 ದಿನಗಳಿಗೆ ಆನ್‍ಲೈನ್ ತಂತ್ರಾಂಶ (www.kudremukhanationalpark.in)ದಲ್ಲಿ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
ಒಬ್ಬರಿಗೆ ನೇತ್ರಾವತಿ ಚಾರಣಕ್ಕೆ ₹500, ಕುದುರೆಮುಖಕ್ಕೆ ₹575 ದರ ನಿಗದಿ ಮಾಡಲಾಗಿದೆ.
Post a comment
Log in to write reviews