ರೈಲು ಮಾರ್ಗದಲ್ಲಿ ಭೂಕುಸಿತ! ಕಾರವಾರ – ಬೆಂಗಳೂರು ಎಲ್ಲಾ ರೈಲುಗಳ ಸಂಚಾರ ಆ 8ರವರೆಗೆ ರದ್ದು!
ಬೆಂಗಳೂರು : ರಾಜ್ಯದೆಲ್ಲೆಡೆ ಭಾರೀ ಮಳೆ ಸುರಿಯುತ್ತಿರುವ ಕಾರಣ ಹಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಅಲ್ಲದೇ ಕೆಲವು ಕಡೆಗಳಲ್ಲಿ ಭೂಕುಸಿತ ಉಂಟಾದ ಕಾರಣ ಬಸ್ ಹಾಗೂ ರೈಲ್ವೆ ಸಂಚಾರದಲ್ಲಿ ಸಮಸ್ಯೆ ಎದುರಾಗಿದೆ. ಪಶ್ಚಿಮ ಘಟ್ಟ ಭಾಗದ ಎಡಕುಮೇರಿ – ಕಡಗರವಳ್ಳಿ ರೈಲು ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ರೈಲು ಹಳಿಗಳ ಮೇಲೆ ಮಣ್ಣು ಕುಸಿದ ಕಾರಣ ರೈಲು ಸಂಚಾರಕ್ಕೆ ತಡೆಯಾಗಿದೆ. ಹಾಗಾಗಿ ಇಲ್ಲಿ ದುರಸ್ತಿ ಕಾರ್ಯಗಳು ನಡೆಯುತ್ತಿದ್ದ ಹಿನ್ನಲೆಯಲ್ಲಿ ಕೊಂಕಣ ರೈಲು (Konkan Railway) ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರವನ್ನು ಆಗಸ್ಟ್ 8ರವರೆಗೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರದ್ದಾದ ರೈಲುಗಳ ವಿವರ ಹೀಗಿದೆ:
- ರೈಲು ನಂ.16595 ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆಗಸ್ಟ್ 7ರವರೆಗೆ ಸಂಪೂರ್ಣ ರದ್ದು.
- ರೈಲು ನಂ.16596 ಕಾರವಾರ- ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
- ರೈಲು ನಂ.01595 ಕಾರವಾರ- ಮಡಗಾಂವ್ ಹಾಗೂ ರೈಲು ನಂ. 01596 ಮಡಗಾಂವ್-ಕಾರವಾರ ವಿಶೇಷ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
- ರೈಲು ನಂ.16585 ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು- ಮುರ್ಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆ.7ರವರೆಗೆ ಸಂಪೂರ್ಣ ರದ್ದು.
- ರೈಲು ನಂ.16586 ಮುರ್ಡೇಶ್ವರ- ಸರ್ ಎಂ.ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಸಂಚಾರ ಆ.8ರವರೆಗೆ ಸಂಪೂರ್ಣ ರದ್ದು.
- ರೈಲು ನಂ.16515 ಕೆಎಸ್ಆರ್ ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ ರೈಲಿನ ಆ.7ರವರೆಗಿನ ಸಂಚಾರ ಸಂಪೂರ್ಣ ರದ್ದು.
- ರೈಲು ನಂ.16516 ಕಾರವಾರ- ಕೆಎಸ್ಆರ್ ಯಶವಂತಪುರ ಎಕ್ಸ್‌ಪ್ರೆಸ್ ರೈಲಿನ ಆ.8ರವರೆಗಿನ ಸಂಚಾರವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ.
ಈ ಕುರಿತು ಕೊಂಕಣ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯವರ ಪ್ರಕಟಣೆ ತಿಳಿಸಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಕಹಿ ಸುದ್ದಿಯನ್ನು ನೀಡಿದೆ. ದುರಸ್ತಿ ಕಾರ್ಯ ನಡೆಯುತ್ತಿರುವ ಸ್ಥಳ ಹಾಗೂ ಆಸುಪಾಸಿನಲ್ಲಿ ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಪ್ರಯಾಣಿಕರ ರೈಲು ಸಂಚಾರಕ್ಕೆ ಇನ್ನೂ ಅವಕಾಶ ನೀಡಿಲ್ಲ. ಆದರೆ ಸದ್ಯದಲ್ಲೇ ದುರಸ್ಥಿ ಕಾರ್ಯ ಸಂಪೂರ್ಣವಾಗಲಿದ್ದು, ನಂತರ ರೈಲು ಸಂಚಾರ ಮುಂದುವರಿಯಲಿದೆ. ಅಲ್ಲಿಯವರೆಗೆ ರೈಲು ಪ್ರಯಾಣಿಕರು ಸಹಕರಿಸುವಂತೆ ವಿನಂತಿಸಲಾಗಿದೆ.
Post a comment
Log in to write reviews