ಬೆಂಗಳೂರ :ರಾಜಧಾನಿಯಲ್ಲಿ. ಭಾನುವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿರುವ ಘಟನೆ ಅಮೃತಹಳ್ಳಿಯ ಮುನಿಸ್ವಾಮಪ್ಪ ಲೇಔಟ್‌ನಲ್ಲಿ ನಡೆದಿದೆ.
ರಾತ್ರಿ ಆರಂಭವಾದ ಮಳೆಯಿಂದ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಇಡೀ ರಾತ್ರಿ ಏರಿಯಾದ ನಿವಾಸಿಗಳು ನಿದ್ರೆಯಿಲ್ಲದೆ ಕಳೆಯುವ ಪರಿಸ್ಥಿತಿ ಎದುರಾಗಿದೆ, ಮಳೆಗೆ ಮನೆ ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಪರದಾಡಿದ ಏರಿಯಾದ ಜನ ಬೆಳಗ್ಗೆ ಮಳೆ ನಿಂತ ಬಳಿಕ ಕೆಸರುಮಯವಾದ ಮನೆಗಳನ್ನು ಸ್ವಚ್ಛಗೊಳಿಸುವುದರಲ್ಲಿ ತೊಡಗಿದ್ದಾರೆ.
ಮತ್ತೊಂದೆಡೆ ಏರಿಯಾದ ಇಡೀ ರಸ್ತೆಗಳು ಜಲಾವೃತಗೊಂಡಿದ್ದು, ಮನೆಯಿಂದ ಹೊರಬರುವುದೇ ದುಸ್ತರವಾಗಿದೆ. ಪ್ರತೀ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮನೆಯಲ್ಲಿರುವ ಸಾಮಗ್ರಿಗಳು ಹಾನಿಗೊಳಗಾಗುತ್ತಿವೆ. ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗುತ್ತಿದೆ' ಎನ್ನುತ್ತಿರುವ ಜನರು, ಮಳೆಯ ಮುನ್ಸೂಚನೆ ಇದ್ದರೂ ಸಹ ಮುನ್ನೆಚ್ಚರಿಕೆ ವಹಿಸದ ಪಾಲಿಕೆಯ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಬಿಟಿಎಂ, ಸಿಟಿ ಮಾರ್ಕೆಟ್ ರಸ್ತೆಗಳು ಜಲಾವೃತ : ಮಳೆಗೆ ಬನಶಂಕರಿ, ಬಿಟಿಎಂ ಲೇಔಟ್, ಬಸವನಗುಡಿ ಕೆ.ಆರ್.ಮಾರ್ಕೆಟ್, ಜೆ.ಸಿ.ರಸ್ತೆ, ರಾಜಾಜಿನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಯಶವಂತಪುರ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಆರಂಭವಾದ ಮಳೆ ಬೆಳಗ್ಗೆವರೆಗೂ ಸುರಿದಿದೆ. ಪರಿಣಾಮ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಿರಂತರ ಮಳೆಯಿಂದಾಗಿ ಬಿಟಿಎಂ ಲೇಔಟ್ನ 2ನೇ ಹಂತದ ಬಹುತೇಕ ಏರಿಯಾಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಚೆನ್ನೈ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ದಾರೆ. ಇತ್ತ ಅಂಡರ್ಪಾಸ್ನಲ್ಲಿ ನೀರು ನಿಂತ ಪರಿಣಾಮ ಆಂಬ್ಯುಲೆನ್ಸ್ ಕೆಟ್ಟು ನಿಂತ ಘಟನೆ ಓಕಳಿಪುರಂನಲ್ಲಿ ನಡೆದಿದೆ.
ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಮುಂಭಾಗ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಕೆ. ಆರ್. ಮಾರ್ಕೆಟ್ ಸುತ್ತಮುತ್ತಲಿನ ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಳೆಪೇಟೆ, ಕಾಟನ್ ಪೇಟೆ ಸಂಪರ್ಕಿಸುವ ರಸ್ತೆಗಳು ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತವಾಗಿದೆ. ಮಳೆ ಸೃಷ್ಟಿಸಿರುವ ಅವಾಂತರದಿಂದಾಗಿ ಬೆಳಗ್ಗೆ ಕೆಲಸಕ್ಕೆ ತೆರಳುವವರೂ ಸಹ ಕಿರಿಕಿರಿ ಅನುಭವಿಸುವಂತಾಗಿದ್ದು, ಇಂದೂ ಸಹ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
Post a comment
Log in to write reviews