ಬೆಂಗಳೂರು: ಮುಡಾ ಅಕ್ರಮ ನಿವೇಶನ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ತಟಸ್ಥವಾಗಿರುವಾಗಲೇ ಇದೀಗ ಇಬ್ಬರು ಸಚಿವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.
ಕಾನೂನು ಬಾಹಿರವಾಗಿ ಕೆಐಡಿಬಿಯಿಂದ ಜಮೀನು ಪಡೆದ ಹಾಗೂ ಕಾನೂನು ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವರಾದ ಪ್ರಿಯಾಂಕ ಖರ್ಗೆ ಹಾಗೂ ಎಂ.ಬಿ.ಪಾಟೀಲ್ ಅವರುಗಳ ಪ್ರಕರಣಗಳ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಈ ಇಬ್ಬರು ಸಚಿವರ ಮೇಲೆ ಕೇಳಿಬಂದಿರುವ ಆರೋಪಗಳ ಕುರಿತು ಸ್ಪಷ್ಟನೆ ನೀಡಬೇಕೆಂದು ಸೂಚಿಸಿದ್ದಾರೆ.
ವಿಶೇಷವೆಂದರೆ ಈ ಹಿಂದೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೊದಲು ಸರ್ಕಾರದಿಂದ ರಾಜ್ಯಪಾಲರು ಉತ್ತರ ಬಯಸಿದ್ದರು.
ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಎಂಬುವರು ಸಚಿವರಾದ ಪ್ರಿಯಾಂಕ ಖರ್ಗೆ ಮತ್ತು ಎಂ.ಬಿ.ಪಾಟೀಲ್ ವಿರುದ್ಧ ನಿಯಮ ಉಲ್ಲಂಘಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ದೂರು ನೀಡಿದ್ದಾರೆ.
ಈ ಇಬ್ಬರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಸೆಕ್ಷನ್ 17ಎ ಅಡಿ ದೂರು ದಾಖಲಿಸಲು ಮನವಿ ಮಾಡಿದ್ದಾರೆ. ಹೀಗಾಗಿ ಸರ್ಕಾರ ವಿರುದ್ಧ ಉತ್ತರ ಬಯಸುತ್ತೇನೆ ಎಂದು ರಾಜ್ಯಪಾಲರು ಪತ್ರದಲ್ಲಿ ಕೋರಿದ್ದಾರೆ.
Post a comment
Log in to write reviews