ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ ಸೋಲು ಮಹೇಂದ್ರ ಸಿಂಗ್ ಧೋನಿಗೆ ತೀವ್ರ ನಿರಾಸೆಯಾಗಿದೆ. ಪಂದ್ಯ ಮುಗಿದ ನಂತರ ಸಹ ಆಟಗಾರರಿಗೆ ಹಸ್ತಲಾಘವ ಮಾಡದೆಯೂ ತೆರಳಿದ್ದರು. ಇದೀಗ ಪಂದ್ಯ ಮುಗಿದ ಒಂದು ದಿನದ ಬಳಿಕವೂ ಆ ನೋವಿನಿಂದ ಹೊರ ಬಂದಿಲ್ಲ ಎಂದು ಹೇಳಲಾಗ್ತಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 27 ರನ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್ ಟಿಕೆಟ್‌ಅನ್ನು ಗೆದ್ದುಕೊಂಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಬಾರಿ ಐಪಿಎಲ್ ಚಾಂಪಿಯನ್ ಮಾಡಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಆಟಗಾರನಾಗಿ ಇದು ಕೊನೆಯ ಟೂರ್ನಿ ಎಂದು ಹೇಳಲಾಗ್ತಿದೆ. ಹೀಗಾಗಿಯೇ ಅವರು ಈ ಬಾರಿ ಸಿಎಸ್‌ಕೆ ತಂಡವನ್ನು ಚಾಂಪಿಯನ್ ಮಾಡಿ ಐಪಿಎಲ್ ಮಾದರಿ ಕ್ರಿಕೆಟ್ ವಿದಾಯ ಹೇಳುವ ಸಿದ್ಧತೆಯಲ್ಲಿದ್ದರು. ಆದರೆ ತಂಡ ಪ್ಲೇಆಫ್‌ಗೂ ಮೊದಲೇ ಹೊರ ಬಿದ್ದಿದ್ದರಿಂದ ಧೋನಿಗೆ ತೀವ್ರ ನಿರಾಶೆ ಉಂಟಾಗಿದೆ.
ಪಂದ್ಯದಲ್ಲಿ ಆರ್‌ಸಿಬಿ ನೀಡಿದ ಗುರಿ ಬೆನ್ನಟ್ಟಿದ ಧೋನಿ ಪಡೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಧೋನಿ ಸಾಕಷ್ಟು ನೊಂದಿದ್ದರು. ಹೀಗಾಗಿ ಪಂದ್ಯದ ಒಂದು ದಿನದ ನಂತರ ತಮ್ಮ ತವರು ರಾಂಚಿಗೆ ತೆರಳಿದರು. ಮನೆಗೆ ಮರಳಿದ ನಂತರ ಅವರ ಊರಿಗೆ ತಲುಪಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಧೋನಿ ರಾಂಚಿ ವಿಮಾನ ನಿಲ್ದಾಣದಿಂದ ಹೊರಗೆ ಬಂದು ಕೆಂಪು ಕಾರಿನಲ್ಲಿ ಕುಳಿತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಅವರು ಹುಟ್ಟೂರಿಗೆ ಬಂದಿರುವ ನಿನ್ನೆಯ ವಿಡಿಯೋ ಎಂದು ಹೇಳಲಾಗುತ್ತಿದೆ. ತಮ್ಮ ನೆಚ್ಚಿನ ಸ್ಟಾರ್ ಕ್ರಿಕೆಟಿಗನ ದರ್ಶನ ಪಡೆಯಲು ಅವರ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದರು.
Post a comment
Log in to write reviews